ಬೆಂಗಳೂರು: ಕೇಂದ್ರ ಸರ್ಕಾರದಿಂದ ನಿನ್ನೆ ಅನ್‍ಲಾಕ್-3.0 ಗೈಡ್‍ಲೈನ್ಸ್ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅನ್‍ಲಾಕ್-3.0 ಗೈಡ್‍ಲೈನ್ಸ್ ಬಿಡುಗಡೆ ಮಾಡಿದ್ದು, ಕೇಂದ್ರದ ಗೈಡ್‍ಲೈನ್ಸ್ ಯಥಾವತ್ತಾಗಿ ಪಾಲಿಸುವುದಾಗಿ ತಿಳಿಸಿದೆ.
ಹೊಸ ಅನ್‍ಲಾಕ್-3.0 ಗೈಡ್‍ಲೈನ್ಸ್ ಪ್ರಕಾರ ಆಗಸ್ಟ್-2ರಿಂದ ಸಂಡೇ ಲಾಕ್‍ಡೌನ್ ತೆರವು ಮಾಡಲು ರಾಜ್ಯ ಸರ್ಕರ ನಿರ್ಧರಿಸಿದೆ. ಈ ಆದೇಶದಿಂದಾಗಿ ಈ ವಾರ ಆಗಬೇಕಿದ್ದ ಸಂಡೇ ಲಾಕ್‍ಡೌನ್ ಇನ್ಮುಂದೆ ಇರುವುದಿಲ್ಲ ಎಂದು ಪ್ರಕಟಿಸಿದೆ.
ಕೇಂದ್ರದ ಮಾರ್ಗಸೂಚಿಯಂತೆ ಆಗಸ್ಟ್ 5ರಿಂದ ಜಿಮ್ ಹಾಗೂ ಯೋಗ ಸೆಂಟರ್‍ಗಳು ತೆರೆಯಲು ಅವಕಾಶ ನೀಡಲಾಗಿದೆ. ಜತೆಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇದೇ ವೇಳೆ, ಮಾಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಕೊರೊನಾ ಸೋಂಕಿತರು ಬಂದ ಕಾರಣ ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಗಡಿಯನ್ನು ಬಂದ್ ಮಾಡಲಾಗಿತ್ತು. ಆಗಸ್ಟ್.1ರಿಂದ ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳ ಗಡಿಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಯಾವುದಕ್ಕೆ ಅವಕಾಶ ಇಲ್ಲ..
ಅನ್‍ಲಾಕ್-3.0 ಮಾರ್ಗಸೂಚಿಯಲ್ಲಿ ಆಗಸ್ಟ್ 31ರವರೆಗೆ ಶಾಲಾ-ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮೆಟ್ರೋ ರೈಲು, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಬಾರ್ ಮತ್ತು ರೆಸ್ಟೋರೆಂಟ್, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶ ನೀಡಿಲ್ಲ.
ಜತೆಗೆ ಕ್ರೀಡಾ ಚಟುವಟಿಕೆ ಆರಂಭಿಸಲು ಅನುಮತಿ ನೀಡಿಲ್ಲ. ಅಸೆಂಬ್ಲಿ ಹಾಲ್ ಓಪನ್ ಮಾಡಲು ಅವಕಾಶ ಇಲ್ಲ. ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ಆ.31ರವರೆಗೆ ಲಾಕ್‍ಡೌನ್ ಮುಂದುವರೆಯಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.








