ಜೋಡೆತ್ತುಗಳ ನೊಗಕ್ಕೆ ಗುರಿ ಇಟ್ರಾ ಯೋಗೇಶ್ವರ್?
ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯರಾದ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಯೋಗೇಶ್ವರ್ ಅವರ ಒಂದು ಹೇಳಿಕೆ ಆಪ್ತಮಿತ್ರರ ನಡುವಿನ ದ್ವೇಷಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಯೋಗೇಶ್ವರ್ ಮಾಡಿದ್ದೇನು ? ಸಿಂಪಲ್ ಆಗಿ ಹೇಳುವುದಾದ್ರೆ ಈಡೊಂದು ಹುಲಿ ಎರಡು ಎಂಬಂತಾಗಿದೆ.
ಹೌದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ನಡುವಿನ ಸ್ನೇಹ ಯಾವ ಮಟ್ಟದಲ್ಲಿತ್ತು ಎಂಬುದು ಎಲ್ಲಿರಿಗೂ ಗೊತ್ತಿರುವ ವಿಚಾರವೇ. ಅದ್ರಲ್ಲೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಮ ಲಕ್ಷ್ಮಣರಂತೆ ಇದ್ದ ಹೆಚ್ಡಿಕೆ – ಡಿಕೆಶಿ ತಮ್ಮ ಹಳೆಯ ದ್ವೇಷಗಳನ್ನು ಮರೆತಿದ್ದರು. ಇನ್ನು ಮಂಡ್ಯ ಲೋಕ ಸಭಾ ಉಪಚುನಾವಣೆಯ ಸಂದರ್ಭದಲ್ಲೂ ಜೋಡೆತ್ತುಗಳು ಎಂದೇ ಇಬರಿಬ್ಬರು ಖ್ಯಾತಿ ಗಳಿಸಿದ್ದರು.
ಆದ್ರೆ ಈಗ ಎಲ್ಲವೂ ಉಲ್ಪಾ ಆಗಿದೆ. ಆಪ್ತಮಿತ್ರರು ಈಗ ಬದ್ಧ ವೈರಿಗಳಂತೆ ಕಾಣುತ್ತಿದ್ದಾರೆ. ಹಳೆಯ ದ್ವೇಷ ಮತ್ತೆ ಶುರುವಾಗಿದೆ ಎಂದು ಅನ್ನಿಸುತ್ತಿದೆ.
ಮೇಲ್ನೋಟಕ್ಕೆ ಡಿಕೆಶಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಲು ಮುಖ್ಯ ಕಾರಣ ಯೋಗೇಶ್ವರ್ ಅವರ ಹೇಳಿಕೆ. ರಾಮನಗರದಲ್ಲಿ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ನಡೆಯುತ್ತಿದೆ ಎಂದು ಹೇಳಿದ್ದೇ ತಡ ಎಚ್.ಡಿ. ಕುಮಾರಸ್ವಾಮಿ ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದ್ರು. ಈ ತಿರುಗೇಟು ನೀಡುವ ಸಮಯದಲ್ಲಿ ಎಚ್‍ಡಿಕೆ ರಾಮನಗರದಲ್ಲಿ ನಡೆಯುತ್ತಿರುವ ಡಿಕೆ ಬ್ರದರ್ಸ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ್ದರು. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸುವ ಭರಾಟೆಯಲ್ಲಿ ಎಚ್‍ಡಿಕೆ ಡಿಕೆ ಬ್ರದರ್ಸ್ ಅವರ ಕಾರ್ಯವೈಖರಿಯ ಬಗ್ಗೆ ಹೇಳಿಕೆ ನೀಡಿದ್ದರು.
ರಾಮನಗರದಲ್ಲಿ ನನ್ನ ಪ್ರಭಾವ ತಗ್ಗಿಸಲು ಡಿ.ಕೆ. ಶಿವಕುಮಾರ್ ತನ್ನ ತಮ್ಮ ಡಿ.ಕೆ.ಸುರೇಶ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು ಮುಗಿಸಲು ತಂತ್ರ ಮಾಡುತ್ತಿದ್ದಾರೆ ಎಂದು ಹೆಚ್ಡಿಕೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸಮ್ಮೀಶ್ರ ಸರ್ಕಾರ ಪತನಗೊಳ್ಳಲು ಡಿಕೆಶಿಯೂ ಕಾರಣ ಎಂದು ಹೇಳಿದ್ದಾರೆ. ಬೆಳಗಾವಿ ರಾಜಕಾರಣದಿಂದಾಗಿ ಸಮ್ಮಿಶ್ರ ಸರ್ಕಾರದ ಪತನವಾಯ್ತು. ಡಿ.ಕೆ. ಶಿವಕುಮಾರ್ ಮನಸ್ಸು ಮಾಡಿದ್ರೆ ಸರ್ಕಾರ ಉಳಿಸಬಹುದಿತ್ತು. ನಿಜವಾದ ಟ್ರಬಲ್ ಶೂಟರ್ ಯಾರು ಎಂದು ಗೊತ್ತಿದೆ ಎಂದು ಡಿಕೆಶಿಗೆ ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.
ಈ ನಡುವೆ, ಡಿಕೆಶಿ ಅವರು ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್‍ಗೆ ಬರ್ತಿನಿ ಅಂತ ಹೇಳಿದ್ದರು. ಬಿಎಸ್‍ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ. ಹೀಗಾಗಿ ನಾನು ಕಾಂಗ್ರೆಸ್‍ಗೆ ವಾಪಸ್ ಬರುತ್ತೀನಿ ಎಂದು ಹೇಳಿದ್ದರು. ಆಗ ನಾನು ನೀನು ಕಾಂಗ್ರೆಸ್ ಬಿಟ್ಟಿದ್ದೀಯಾ, ಬಿಜೆಪಿಗೆ ನಿಷ್ಠೆಯಿಂದ ಕೆಲಸ ಮಾಡು ಎಂದು ಸಲಹೆ ನೀಡಿದ್ದೆ. ಈಗ ಯಾಕೆ ಹೀಗೆ ಹೇಳುತ್ತಿದ್ದಾನೆ ಅಂತ ಗೊತ್ತಿಲ್ಲ ಎಂದು ಡಿಕೆಶಿ ಯೋಗೇಶ್ವರ್ ವಿರುದ್ಧ ಕಿಡಿ ಕಾರಿದ್ದಾರೆ. ಡಿಕೆ ಶಿವಕುಮಾರ್ ಬಿಜೆಪಿ ಬರುತ್ತಾರೆ. ಅವರು ನೆಪ ಮಾತ್ರಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬಿಎಸ್‍ವೈ ಅವರನ್ನು ಭೇಟಿ ಮಾಡಿಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಗೇಶ್ವರ್ ಅವರು ಡಿಕೆಶಿ ವಿರುದ್ಧ ಬಾಂಬ್ ಹಾಕಿದ್ದರು.
ಒಟ್ಟಿನಲ್ಲಿ ಸಿ.ಪಿ. ಯೋಗೇಶ್ವರ್ ಅವರ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಹೇಳಿಕೆಯಿಂದ ಪರಮಾಪ್ತರು ಈಗ ಉತ್ತರ ಧ್ರುವ – ದಕ್ಷಿಣ ಧ್ರುವ ಅಂತಾಗಿದ್ದಾರೆ. ಇದು ಒಂದು ಕಾರಣ ಅಷ್ಟೇ. ಆದ್ರೆ ಅಸಲಿ ವಿಚಾರ ಬೇರೆಯೇ ಇದೆ. ಒಕ್ಕಲಿಗರ ಪ್ರಭಾವಿ ನಾಯಕನಾಗಲು ಡಿಕೆಶಿ ಮತ್ತು ಎಚ್‍ಡಿಕೆ ನಡುವೆ ಪೈಪೋಟಿ ನಡೆಯುತ್ತಿರುವುದು ಇಂದು ನಿನ್ನೆಯದಲ್ಲ. ಇದೀಗ ಕೆಪಿಸಿಸಿ ಅಧ್ಯಕ್ಷನಾಗಿರುವ ಡಿ.ಕೆ. ಶಿವಕುಮಾರ್ ಭವಿಷ್ಯ ಮುಖ್ಯಮಂತ್ರಿ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗೇ ಡಿಕೆಶಿಯವರು ತಮ್ಮ ಹಣ ಬಲ ಮತ್ತು ಜನ ಬಲದ ಮೂಲಕ ಪಕ್ಷವನ್ನು ಸಂಘಟಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆಯೂ ಅಷ್ಟೇನೂ ಒಳ್ಳೆಯ ಜನಾಭಿಪ್ರಾಯವೂ ಇಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಲು ಡಿ.ಕೆ. ಶಿವಕುಮಾರ್ ಶತ ಪ್ರಯತ್ನ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ದಿನದಿಂದ ದಿನಕ್ಕೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಇದು ಎಚ್.ಡಿ.ಕುಮಾರ ಸ್ವಾಮಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಹಾಗಾಗಿ ಹೇಗಾದ್ರೂ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂಬ ಉಮೇದು ಇದ್ರೂ ಅದು ಸರಿಯಾಗಿ ಕೈಗೂಡುತ್ತಿಲ್ಲ. ರಾಜ್ಯ ರಾಜಕಾರಣದಲ್ಲಿ ಡಿಕೆಶಿಯವರ ವರ್ಚಸ್ಸು ಹೆಚ್ಚುತ್ತಿರುವುದು ಎಚ್‍ಡಿಕೆಗೆ ತಳಮಳವನ್ನುಂಟು ಮಾಡುತ್ತಿದೆ. ಇಷ್ಟು ದಿನ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಎಚ್‍ಡಿಕೆ ಈಗ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರಭಾವಿ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಎಚ್‍ಡಿಕೆ ಅವರ ಹೇಳಿಕೆಯಿಂದ ಮತ್ತೆ ಮತ್ತೆ ಸಾಬೀತಾಗ್ತಿದೆ.








