ಬೆಂಗಳೂರು: ತಮ್ಮನ್ನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಎಂದು ಟೀಕಿಸಿರುವ ಎಂಎಲ್ಸಿ ಸಿ.ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಮಸಾಲೆ ಅರೆಯುತ್ತಿರುವ ವ್ಯಕ್ತಿಯ ಕುತಂತ್ರ ರಾಜಕಾರಣಕ್ಕೆ ರಾಮನಗರ ಜಿಲ್ಲೆಯ ಜನತೆ ಸೊಪ್ಪು ಹಾಕಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಅಡ್ಜಸ್ಟ್ ಮೆಂಟ್ ರಾಜಕಾರಣವನ್ನು ಹಿಂದೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ಡಿ.ಕೆ ಶಿವಕುಮಾರ್ ಹಾಗೂ ನನ್ನ ನಡುವಿನ ರಾಜಕಾರಣವೇ ಬೇರೆ, ವಿಶ್ವಾಸವೇ ಬೇರೆ. ಹಿಂಬಾಗಿಲ ಮೂಲಕ ನೆಲೆ ಕಂಡುಕೊಂಡವರಿಂದ ಡ್ಯಾಮೇಜ್ ಮಾಡಲು ಆಗಲ್ಲ ಎಂದು ಕುಮಾರಸ್ವಾಮಿ ಸರಣಿ ಟ್ವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಂದು ಗುರಿ ಇಟ್ಟುಕೊಂಡು ದುಡಿಮೆ ಮಾಡುತ್ತಾರೆ. ಈ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನೆರೆ ಹಾವಳಿ, ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜಕಾರಣ ಬಿಟ್ಟು ರಾಜ್ಯದ ಜನತೆಯ ಹಿತಕಾಯುವ ದೃಷ್ಟಿಯಿಂದ ಸರ್ಕಾರಕ್ಕೆ ಬೆಂಬಲ ಇದೆ ಎಂದಾಕ್ಷಣ, ಅದನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಕೀಳು ಅಭಿರುಚಿಯ ಹೇಳಿಕೆ ನೀಡುವುದು ಯಾರಿಗೂ ಶೋಭೆ ತರಲ್ಲ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ತನಗೆ ಮುನಿದವರಿಗೆ ತಾ ಮುನಿಯಲೇಬೇಕಯ್ಯ ? ತನಗಾದ ಆಗೇನು ? ಅವರಿಗಾದ ಚೇಗೆಯೇನು ? ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆ ಮನೆಯ ಸುಡದು. ಕೂಡಲ ಸಂಗಮದೇವಾ ಎಂದು ಮತ್ತೊಂದು ಟ್ವೀಟ್ನಲ್ಲಿ ಕುಟುಕಿದ್ದಾರೆ.
ಎಂಎಲ್ಸಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಸಿ.ಪಿ ಯೋಗೇಶ್ವರ್, ಕುಮಾರಸ್ವಾಮಿ ಹೇಳಿದ ಎಲ್ಲಾ ಕೆಲಸಗಳು ನಮ್ಮ ಸರ್ಕಾರದಲ್ಲಿ ಆಗುತ್ತಿವೆ. ಹೀಗಾಗಿ ಅವರು ಬಿಜೆಪಿ ಸೇರ್ಪಡೆಯಾಗುವಂತೆ ಬಹಿರಂಗ ಆಹ್ವಾನ ನೀಡುತ್ತಿದ್ದೇನೆ. ಹೆಚ್ಡಿಕೆ ಬೆಂಬಲ ಬಿಜೆಪಿ ಸರ್ಕಾರಕ್ಕೆ ಇರುವ ಕಾರಣ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದು ಹೇಳಿದ್ದರು.