ಕ್ವಾರಂಟೈನ್ ಗೆ ಒಳಗಾದ ನಾಗಾಲ್ಯಾಂಡ್ ಮುಖ್ಯಮಂತ್ರಿ
ಕೊಹಿಮಾ, ಜುಲೈ 31: ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಅವರು ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಅವರ ವಸತಿ ಸಮುಚ್ಚಯದ ಕೆಲವು ಸಿಬ್ಬಂದಿಗಳಿಗೆ ಕೊರೋನವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್ ಗೆ ಒಳಗಾಗಲಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಸತಿ ಸಂಕೀರ್ಣವನ್ನು ಸ್ವಚ್ಛಗೊಳಿಸಲಾಗುತ್ತಿದೆ ಮತ್ತು ಎಲ್ಲಾ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ವಸತಿ ಸಮುಚ್ಚಯದಲ್ಲಿ ಕೆಲವು ಜನರಿಗೆ ಕೋವಿಡ್-19 ದೃಢಪಟ್ಟಿದೆ. ಹಾಗಾಗಿ ಸಂಕೀರ್ಣವನ್ನು ಸ್ವಚ್ಛ ಗೊಳಿಸಲಾಗುತ್ತಿದೆ ಮತ್ತು ವಸತಿ ಕಚೇರಿಯನ್ನು 48 ಗಂಟೆಗಳ ಕಾಲ ಮುಚ್ಚಲಾಗಿದೆ. ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಮುಖ್ಯಮಂತ್ರಿಗಳ ಸಾಮಾನ್ಯ ಕಾರ್ಯವು ಮುಂದುವರಿಯುತ್ತಿದೆ.
ಸುರಕ್ಷತಾ ಮುನ್ನೆಚ್ಚರಿಕೆಯಾಗಿ, ಗೌರವಾನ್ವಿತ ಮುಖ್ಯಮಂತ್ರಿಯವರು ಹೋಂ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ ಎಂದು ಸಿಎಂಒ ಟ್ವೀಟ್‌ನಲ್ಲಿ ತಿಳಿಸಿದೆ.
ಏತನ್ಮಧ್ಯೆ, ಮುಖ್ಯಮಂತ್ರಿಯವರ ವಸತಿ ಸಮುಚ್ಚಯದ ಸಿಬ್ಬಂದಿ ಸೇರಿದಂತೆ ಇನ್ನೂ 53 ಜನರಿಗೆ ಕೋವಿಡ್-19 ದೃಢಪಟ್ಟಿದ್ದು ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,566 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಸ್ ಪಂಗ್ನ್ಯು ಫೋಮ್ ತಿಳಿಸಿದ್ದಾರೆ. ಹೊಸ ಪ್ರಕರಣಗಳಲ್ಲಿ 32 ಪ್ರಕರಣಗಳು ದಿಮಾಪುರದಲ್ಲಿ, 16 ಕೊಹಿಮಾದಲ್ಲಿ ಮತ್ತು 5 ಮೊಕೊಕ್ಚುಂಗ್‌ನಲ್ಲಿ ವರದಿಯಾಗಿವೆ ಎಂದು ಅವರು ಹೇಳಿದರು.