ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧ ದೇಶಾದ್ಯಂತ ಪ್ರತಿಭಟನೆ ಬುಗಿಲೆದ್ದಿದೆ. ಹಾಗೇ ಸಿಎಎ ಹಾಗೂ ಎನ್‍ಪಿಆರ್ ಸಂಬಂಧ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ನಡುವೆ ನರೇಂದ್ರ ಮೋದಿ ಅವರ ಪೌರತ್ವ ಪ್ರಮಾಣ ಪತ್ರವನ್ನು ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅರ್ಜಿಗೆ ಪಿಎಂಒ ನೀಡಿರುವ ಉತ್ತರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸುಭಾಂಕರ್ ಸರ್ಕಾರ್ ಎಂಬಾತ ಪ್ರಧಾನಿ ಮೋದಿ ಅವರ ಪೌರತ್ವ ಪ್ರಮಾಣ ಪತ್ರವನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆ(ಆರ್‍ಟಿಐ)ಯಡಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿದಾರನ ಮನವಿಗೆ ಪ್ರತಿಕ್ರಿಯಿಸಿರುವ ಪಿಎಂಒ ನೀಡಿರುವ ಉತ್ತರ ಅರ್ಜಿದಾರನ ಮುಖಭಂಗ ಉಂಟು ಮಾಡಿದೆ.
ಪಿಎಂಒ ನೀಡಿರು ಉತ್ತರ ಇಂತಿದೆ, 1955ರ ಪೌರತ್ವ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುಟ್ಟಿನಿಂದಲೇ ಭಾರತೀಯ ಪ್ರಜೆಯಾಗಿದ್ದಾರೆ. ಹೀಗಾಗಿ ಅವರು ಪೌರತ್ವ ನೋಂದಣಿಗಾಗಿ ಪ್ರಮಾಣ ಪತ್ರ ಹೊಂದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.
ಇನ್ನು, ಪ್ರಧಾನಿ ಕಾರ್ಯಾಲಯ ನೀಡಿರುವ ಉತ್ತರಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಪಿಎಂಒ ನೀಡಿರುವ ಉತ್ತರ ಅಸ್ಪಷ್ಟವಾಗಿದೆ ಎಂದು ಕೆಲವರು ವಾದಿಸಿದ್ದಾರೆ. ಇನ್ನು ಕೆಲವರು ಪಿಎಂಒ ಉತ್ತರ ಸರಿಯಾಗಿದೆ ಎಂದು ಬೆನ್ನಿಗೆ ನಿಂತಿದ್ದಾರೆ. ಇತ್ತ, ಹಿರಿಯ ಪತ್ರಕರ್ತ ಸೀಮಿ ಪಾಷ ಆರ್‍ಟಿಐ ಪ್ರತಿಯನ್ನು ಟ್ವೀಟ್ ಮಾಡಿ, 1955ರ ಪೌರತ್ವ ಕಾಯ್ದೆ ಪ್ರಕಾರ ಪ್ರಧಾನಿ ಮೋದಿ ಪೌರತ್ವ ನೋಂದಣಿ ಬೇಕಾಗಿಲ್ಲ ಎನ್ನುವುದಾದರೆ, ಇತರರು ಏಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.








