ಬೆಂಗಳೂರು: ಕೊರೊನಾ ಮೆಡಿಕಲ್ ಕಿಟ್ ಖರೀದಿಯಲ್ಲಿ 2 ಸಾವಿರ ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‍ಗೆ ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾಡಿರುವ ಆರೋಪಗಳು ಶುದ್ಧ ಸುಳ್ಳು. ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅವರು ಮಾಡಿದ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಲೀಗಲ್ ನೋಟಿಸ್ ಜಾರಿ ನೀಡಿದ್ದೇವೆ ಎಂದು ಬಿಜೆಪಿ ವಕ್ತಾರ ರವಿಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಸಚಿವರೇ ಖುದ್ದಾಗಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. 2 ಸಾವಿರ ಕೋಟಿಯಷ್ಟು ಉಪಕರಣಗಳ ಖರೀದಿಯನ್ನೇ ಮಾಡಿಲ್ಲ. ಹಾಗಾದರೆ, 2 ಸಾವಿರ ಕೋಟಿ ಅವ್ಯವಹಾರ ಆಗುವುದು ಹೇಗೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದ, ಆಧಾರ ರಹಿತ ಆರೋಪಗಳಾಗಿವೆ. ಈ ಹಿನ್ನೆಲೆಯಲ್ಲಿ ತಿಳುವಳಿಕೆ ಪತ್ರ ನೀಡಿದ್ದೇವೆ ಎಂದರು.
ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಸಹಿಸದ ಕಾಂಗ್ರೆಸ್‍ಗೆ ಹೊಟ್ಟೆ ಉರಿ ಶುರುವಾಗಿದೆ. ಹೀಗಾಗಿಯೇ ಸುಳ್ಳು ಆರೋಪ ಮಾಡಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಸರ್ಕಾರಕ್ಕೆ 20 ಪತ್ರ ಬರೆದಿದ್ದೆ, ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಅಂಕಿ ಅಂಶ ಕೇಳಿ ಪತ್ರ ಬರೆಯುವ ನೀವು ಅಂಕಿಅಂಶಗಳನ್ನು ಇಟ್ಟುಕೊಂಡೇ 4 ಸಾವಿರ ಕೋಟಿ ಖರ್ಚಾಗಿದೆ. 2 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಗೆ ಹೇಳಿದ್ದೀರಿ. ಸತ್ಯಕ್ಕೆ ದೂರವಾದ ಆರೋಪ ಮಾಡಿದ್ದರಿಂದ ನೋಟಿಸ್ ನೀಡಿದ್ದೇವೆ ಎಂದರು.