ಗುರುವಿನ ಕಷ್ಟಕ್ಕೆ ಸ್ಪಂದಿಸಿದ ವಿದ್ಯಾರ್ಥಿಗಳು
ಜಗ್ತಿಯಲ್, ಜುಲೈ 31: ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದ್ದು , ಕೊರೋನಾ ನಡುವೆ ಜೀವನ ಮತ್ತು ಮುಂದೇನು ಎನ್ನುವ ಅನೇಕ ಆಲೋಚನೆ ತವಕಗಳ ನಡುವೆ, ಜಗ್ತಿಯಲ್ ಜಿಲ್ಲೆಯ ಕೊರುಟ್ಲಾದಲ್ಲಿ ತನ್ನ ಕೆಲಸ ಕಳೆದುಕೊಂಡ ಗುರುವಿಗೆ ಆತನ ವಿದ್ಯಾರ್ಥಿಗಳು ಟಿಫಿನ್ ಕೇಂದ್ರವನ್ನು ಪ್ರಾರಂಭಿಸಲು ಒಂದು ಶೆಡ್ ನಿರ್ಮಿಸಿಕೊಡುವ ಮೂಲಕ ಗುರುದಕ್ಷಿಣೆ ನೀಡಲು ಮುಂದಾಗಿದ್ದಾರೆ .
52 ವರ್ಷದ ಶಿಕ್ಷಕ ಹನುಮಂತುಲಾ ರಘು, ರುದ್ರಂಗಿಯ ಝೆಡ್ ಪಿ ಪ್ರೌಡಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಇಂಗ್ಲಿಷ್ ಮತ್ತು ಜೀವಶಾಸ್ತ್ರವನ್ನು ಅನೇಕ ವರ್ಷಗಳಿಂದ ಕಲಿಸುತ್ತಿದ್ದರು ಮತ್ತು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಆದರೆ ಲಾಕ್‌ಡೌನ್ ಹೇರಿದ ನಂತರ ಅವರು ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆಂದು ತಿಳಿದು ಪರಿಹಾರದ ಅಲೆಯೊಂದು ಹರಿದುಬಂದಿತು. ತನ್ನ ವಿದ್ಯಾರ್ಥಿಗಳೇ ಅವರಿಗೆ ಸಹಾಯ ಹಸ್ತ ನೀಡಲು ಬಂದಾಗ ರಘು ಅದನ್ನು ತೀವ್ರವಾಗಿ ನಿರಾಕರಿಸಿದರು. ಆದರೆ ವಿದ್ಯಾರ್ಥಿಗಳು ಪಟ್ಟು ಬಿಡದೆ ಗುರುವಿನ ಮನ ಒಲಿಸಿದರು.
ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಕಳೆದುಕೊಂಡ ನಂತರ, ಅವರಿಗೆ ಕುಟುಂಬ ನಿರ್ವಹಣೆ ಕಠಿಣವಾಯಿತು. ಅವರಿಗೆ ಬಿ.ಎಡ್ ಮುಗಿಸಿ ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಗನಿದ್ದರೂ, ಆತನು ತನ್ನ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ.
ಅವರು ತನ್ನ ಜೀವನದ ಕಹಿ ಹಂತವನ್ನು ಅನುಭವಿಸುತ್ತಿದ್ದಾಗ, 1997-98 ಬ್ಯಾಚ್‌ನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ವಾಟ್ಸಾಪ್‌ನಲ್ಲಿ ಒಗ್ಗೂಡಿ ಅವರಿಗೆ ಸಹಾಯ ಮಾಡಲು ನಿರ್ಧರಿಸಿದರು.
ಶೆಡ್ ಈಗ ಬಹುತೇಕ ಸಿದ್ಧವಾಗಿದೆ ಮತ್ತು ಅವರು ಮತ್ತೆ ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದಾರೆ. ಭಾನುವಾರದಿಂದ ಅವರ ಟಿಫಿನ್ ಕೇಂದ್ರ ಪ್ರಾರಂಭವಾಗಲಿದೆ. ಜೊತೆಗೆ ಅವರ ವಿದ್ಯಾರ್ಥಿಗಳು ಗ್ರಾಹಕರನ್ನು ಟಿಫಿನ್ ಕೇಂದ್ರಕ್ಕೆ ಕರೆತರುವ ಭರವಸೆಯನ್ನು ಕೂಡ ನೀಡಿದ್ದಾರೆ.
ವಿದ್ಯಾರ್ಥಿಗಳ ಸಹಾಯ ನೋಡಿ ಭಾವುಕರಾದ ರಘು ನನ್ನ ರಕ್ಷಣೆಗೆ ಬಂದ ನನ್ನ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಲ್ಲಿ ಪದಗಳಿಲ್ಲ, ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಸಹಾಯದಿಂದ ನಿರ್ಮಿಸಿರುವ ಆ ಟಿಫಿನ್ ಕೇಂದ್ರಕ್ಕೆ ಶಿಕ್ಷಕ ರಘ ಗುರುದಕ್ಷಿಣಾ ಎಂದು ಹೆಸರಿಟ್ಟಿದ್ದಾರೆ.
ಒಟ್ಟಿನಲ್ಲಿ ಕೊರೋನಾ ಅತಂತ್ರಕ್ಕೆ ಮಾನವೀಯತೆಯನ್ನು ಮರೆಯದೆ ತನ್ನ ಗುರುವಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ನೇರವಾದ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಶ್ಲಾಘನೀಯ.