ಹಾವೇರಿ: ಕೃಷಿ ಸಚಿವ ಕೌರವ ಬಿ.ಸಿ ಪಾಟೀಲ್ ಅವರ ಪತ್ನಿ, ಅಳಿಯ ಹಾಗೂ ಸಿಬ್ಬಂದಿ ಸೇರಿದಂತೆ ಐವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿರುವ ಸಚಿವ ಬಿ.ಸಿ ಪಾಟೀಲ್ ಪತ್ನಿ, ಅಳಿಯ ಹಾಗೂ ಹಿರೇಕೆರೂರು ನಿವಾಸದ ಸಿಬ್ಬಂದಿ ಸೇರಿದಂತೆ ಐವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐವರನ್ನು ನಿರ್ಧಿಷ್ಟ ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸಲಾಗಿದೆ. ಅವರೆಲ್ಲಾ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಬಿ.ಸಿ ಪಾಟೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ. ಹೊರಗೆ ಬರಲೇಬೇಡಿ, ಮನೆಯಿಂದ ಹೊರಗೆ ಬರಲೇಬೇಕಾದ ಸಂದರ್ಭವಿದ್ದಲ್ಲಿ ಆಗಾಗ ಕೈತೊಳೆಯುತ್ತಾ ಸ್ಯಾನಿಟೈಸರ್ ಬಳಸುತ್ತಾ, ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲಿಸುವಂತೆ ಬಿ.ಸಿ ಪಾಟೀಲ್ ಟ್ವಿಟರ್‍ನಲ್ಲಿ ಮನವಿ ಮಾಡಿದ್ದಾರೆ.
ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ದಯವಿಟ್ಟು ಯಾರೂ ಬಂದು ನನ್ನನ್ನು ಭೇಟಿ ಮಾಡಲು ಬರಬೇಡಿ. ಏನಾದ್ರೂ ಅಗತ್ಯವಿದ್ದಲ್ಲಿ ನನ್ನ ಮೊಬೈಲ್ ನಂಬರ್‍ಗೆ ಕರೆ ಮಾಡುವಂತೆ ಟ್ವಿಟರ್‍ನಲ್ಲಿ ತಮ್ಮ ಮೊಬೈಲ್ ನಂಬರ್ ಶೇರ್ ಮಾಡಿದ್ದಾರೆ.
ತಮ್ಮ ಕುಟುಂಬ ಸದಸ್ಯರಿಗೆ ಕೊರೊನಾ ಬಂದಿದ್ದರೂ ತಾವು ಅವರ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕ ಹೊಂದಿದ್ದಾರಾ, ಹೋಂ ಕ್ವಾರಂಟೈನ್ ಆಗುತ್ತಾರಾ ಇಲ್ಲವಾ ಎಂಬುದರ ಬಗ್ಗೆ ಬಿ.ಸಿ ಪಾಟೀಲ್ ಯಾವುದೇ ಮಾಹಿತಿ ನೀಡಿಲ್ಲ.
ಬಿ.ಸಿ ಪಾಟೀಲ್ ಮೊ: 94484,67366