ಹಾಸನ: ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳಿಂದ ಒತ್ತಡಕ್ಕೆ ಒಳಗಾದ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಕಿರಣ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವಾದರೂ ಹಿರಿಯ ಅಧಿಕಾರಿಗಳು ಕೆಲಸದಿಂದ ತನ್ನನ್ನು ಅಮಾನತುಗೊಳಿಸಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿಯ ಬಾಗೂರು ರಸ್ತೆಯಲ್ಲಿ ಜುಲೈ 30 ರಂದು ಪಾರಿವಾಳ ವಿಚಾರಕ್ಕೆ ವ್ಯಕ್ತಿಯೋರ್ವನ ಕೊಲೆಯಾಗಿತ್ತು. ಕಳೆದ ರಾತ್ರಿ ಇಬ್ಬರು ಯುವಕರ ನಡುವೆ ಜಗಳ ನಡೆದು ಓರ್ವ ಕೊಲೆಯಾಗಿದ್ದ. ಕೇವಲ 24 ಗಂಟೆಯೊಳಗೆ ಇಬ್ಬರ ಕೊಲೆ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಬಾಗೂರು ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ್ದ ಪೆÇಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಕಳೆದ ರಾತ್ರಿ ಕೊಲೆ ನಡೆದ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಲು ಪಿಎಸ್ಐ ಕಿರಣ್ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಪೆÇಲೀಸರ ವಿರುದ್ಧ ಅಪಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ. ಕೆಲ ಸಾಮಾಜಿಕ ಜಾಲತಾಣದ ಗ್ರೂಪ್ಗಳಲ್ಲಿ ಪೆÇಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.
ಕೊಲೆಯಾದ ಯುವಕನ ಗ್ರಾಮಕ್ಕೆ ಪರಿಶೀಲನೆಗೆಂದು ಪೆÇಲೀಸರು ತೆರಳಿದ್ದ ವೇಳೆ ಅವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಜನ, ನ್ಯಾಯ ಕೊಡಿಸದಿದ್ದರೆ ನಾವು ಶಾಸಕ ಬಾಲಕೃಷ್ಣ ಮನೆ ಮುಂದೆ ಧರಣಿ ಕೂರುತ್ತೇವೆಂದು ಎಚ್ಚರಿಸಿದ್ದರು.
ಪರಿಸ್ಥಿತಿಯನ್ನು ತಿಳಿಗೊಳಿಸಿ ಮುಂಜಾನೆ ಠಾಣೆಗೆ ಬಂದು ತನ್ನ ಸಹೋದ್ಯೋಗಿಯೊಂದಿಗೆ ಕೆಲಹೊತ್ತು ಪಿಎಸ್ಐ ಕಿರಣ್ ಮಾತನಾಡಿದ್ದರು. ಎರಡು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಶೀಲನೆಗಾಗಿ ಮೈಸೂರಿನಿಂದ ಅಧಿಕಾರಿಗಳ ತಂಡ ಬರುತ್ತಿದೆ. ಎಲ್ಲಿ ಕರ್ತವ್ಯಲೋಪ ಆರೋಪದಡಿ ಅಮಾನತುಗೊಳಿಸುತ್ತಾರೋ ಎಂಬ ಭಯದಿಂದ ಮನೆಗೆ ತೆರಳಿದ್ದರು ಎನ್ನಲಾಗಿದೆ. ಹೀಗೆ ಮನೆಗೆ ಹೋದವರು ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಎರಡು ದಿನದ ಅವಧಿಯಲ್ಲಿ ಎರಡು ಕೊಲೆ ನಡೆದು ಬೆಚ್ಚಿಬಿದ್ದಿದ್ದ ಚನ್ನರಾಯಪಟ್ಟಣದ ಜನತೆಗೆ ಪೆÇಲೀಸ್ ಅಧಿಕಾರಿಯೇ ಅತ್ಮಹತ್ಯೆ ಮಾಡಿಕೊಂಡಿರುವುದು ಆತಂಕ ಹೆಚ್ಚಿಸಿದೆ.
2009ರಲ್ಲಿ ಪೆÇಲೀಸ್ ಇಲಾಖೆಗೆ ಸೇರಿದ್ದ ಕಿರಣ್, ಚಾಮರಾಜನಗರದ ಗ್ರಾಮಾಂತರ ಠಾಣೆ ಮತ್ತು ಬೇಗೂರು ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ವರ್ಷ ಸ್ವಂತ ಜಿಲ್ಲೆಯಾದ ಹಾಸನದ ಚನ್ನರಾಯಪಟ್ಟಣ ಪೆÇಲೀಸ್ ಠಾಣೆಗೆ ನಿಯುಕ್ತಿಗೊಂಡು ಉತ್ತಮ ಕೆಲಸದ ಮೂಲಕ ಹೆಸರು ಗಳಿಸಿದ್ದರು.
ಮೇಲಧಿಕಾರಿಗಳ ಒತ್ತಡ: ಹೆಚ್.ಡಿ ರೇವಣ್ಣ ಕಿಡಿ
ಮೇಲಧಿಕಾರಿಗಳ ಒತ್ತಡದಿಂದ ಪಿಎಸ್ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ನನಗೆ ತಿಳಿದ ಮಾಹಿತಿ. ಪಿಎಸ್ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಫೋನ್ ಕಿತ್ತುಕೊಂಡಿದ್ದಾರೆ. ಅವರ ಫೋನ್ ಕಾಲ್, ಮೆಸೇಜ್ಗಳನ್ನು ಡಿಲೀಟ್ ಮಾಡಬಹುದು ಎಂಬ ಶಂಕೆ ಇದೆ. ಐಜಿಪಿ ವಿಪುಲ್ ಕುಮಾರ್ ಕಿರಣ್ ಅವರ ಫೋನ್ ವಶಕ್ಕೆ ಪಡೆದಿದ್ದಾರೆ. ಆದರೆ, ಕಿರಣ್ ಅವರ ಮನೆಯವರ ಮುಂದೆ ಫೋನ್ ಮಹಜರು ಮಾಡಬೇಕಿತ್ತು. ಆದರೆ ಹಾಗೆ ಮಾಡದ ಹಿರಿಯ ಅಧಿಕಾರಿಗಳ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪಿಸಿದ್ದಾರೆ.