ಕ್ರೈಸ್ಟ್ ಚರ್ಚ್ : ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಸತತ ಎರಡನೇ ಸರಣಿಯನ್ನೂ ಸೋತಿದೆ. ಏಕದಿನ ಸರಣಿಯಲ್ಲಿ ಅತಿಥೇಯರ ಬಳಿ ವೈಟ್ ವಾಶ್ ಮಾಡಿಸಿಕೊಂಡಿರುವ ಭಾರತೀಯ ತಂಡ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವೇ ಹೀನಾಯ ಸೋಲು ಅನುಭವಿಸುವ ಮೂಲಕ 0-2 ಅಂತರದಿಂದ ಟೆಸ್ಟ್ ಸರಣಿಯಲ್ಲೂ ಮಣ್ಣು ಮುಕ್ಕಿದೆ.
ಏಳು ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದರೂ ಎರಡನೇ ಇನಿಂಗ್ಸ್ ನಲ್ಲಿ ಅಲ್ಪಮೊತ್ತಕ್ಕೆ ಕುಸಿದ ಭಾರತ ಸುಲಭವಾಗಿ ಸೋಲೊಪ್ಪಿಕೊಂಡಿತು. ಗೆಲುವಿಗೆ 132 ರನ್‌ಗಳ ಗುರಿ ಪಡೆದ ಅತಿಥೇಯ ತಂಡ ಮೊದಲ ವಿಕೆಟ್‌ಗೆ 103 ರನ್ ಕಲೆ ಹಾಕುವ ಮೂಲಕ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಆಟಗಾರರಾದ ಥಾಮ್ ಲ್ಯಾಥಮ್ ಮತ್ತು ಟಾಮ್ ಬ್ಲಂಡೆಲ್ ಅವರ ಅರ್ಧಶತಕಗಳು ನ್ಯೂಜಿಲೆಂಡ್ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ನಾಯಕ ಕೇನ್ ವಿಲಿಯಮ್ಸನ್ (5) ಮತ್ತು ಬ್ಲಂಡೆಲ್ (51) ಅವರ ವಿಕೆಟನ್ನು ಕ್ಷಿಪ್ರ ಅಂತರದಲ್ಲಿ ಕಳೆದುಕೊಂಡರೂ, ರಾಸ್ ಟೇಲ್ ಮತ್ತು ಹೆನ್ರಿ ನಿಕೋಲಸ್ ಗೆಲುವಿನ ಔಪಚಾರಿಕತೆ ಪೂರೈಸಿದರು. ಭಾರತದ ಪರ ಬೂಮ್ರಾ 2 ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಿಮ್ ಸೌಥಿ (36ಕ್ಕೆ 3) ಮತ್ತು ಟ್ರೆಂಟ್ ಬೋಲ್ಟ್ (28ಕ್ಕೆ 4) ಅವರ ಮಾರಕ ದಾಳಿಗೆ ತರಗೆಲೆಯಾದ ಭಾರತ ತಂಡ ಕೇವಲ 124 ರನ್‌ಗಳಿಗೆ ಕುಸಿಯಿತು.
ಸ್ಕೋರ್ ವಿವರ:
ಭಾರತ: ಮೊದಲ ಇನಿಂಗ್ಸ್ 242, ಎರಡನೇ ಇನಿಂಗ್ಸ್ 124,
ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 235, ಎರಡನೇ ಇನಿಂಗ್ಸ್ 132








