ಕೋವಿಡ್-19 ಸಮಯದಲ್ಲಿ ಕಷಾಯ, ಮಾತ್ರೆ ತೆಗೆದುಕೊಳ್ಳಲು ಸಮಯವಲ್ಲ – ಉಡುಪಿ ಡಿಸಿ
ಉಡುಪಿ, ಅಗಸ್ಟ್ 2: ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷಿಸಿ ಮನೆಯಲ್ಲೇ ಕುಳಿತು ಗಂಭೀರವಾದ ಬಳಿಕ ಆಸ್ಪತ್ರೆಗೆ ಬರುವುದಲ್ಲ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಜನತೆಗೆ ಉಡುಪಿ ಜಿಲ್ಲಾಧಿಕಾರಿ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದು, ಕೆಲವರು ಕೊರೋನಾ ಸೋಂಕಿನ ರೋಗಲಕ್ಷಣಗಳನ್ನು ನಿರ್ಲಕ್ಷಿಸಿ ಮನೆಯಲ್ಲೇ ಕುಳಿತು ಕೊನೆಯ ಸಮಯದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ನ ಸಣ್ಣ ಲಕ್ಷಣ ಕಾಣಿಸಿಕೊಂಡರೂ ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ. ಜಿಲ್ಲೆಯಲ್ಲಿ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಮತ್ತು ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೋವಿಡ್-19 ನ ಲಕ್ಷಣಗಳಾದ ಕೆಮ್ಮು, ಶೀತ, ಜ್ವರ ಗಂಟಲು ನೋವು ಕಾಣಿಸಿಕೊಂಡರೂ ತಪಾಸಣೆ ಮಾಡಿಸಿಕೊಳ್ಳಿ. ಜ್ವರ ಎಂದು ಕೇವಲ ಕಷಾಯ, ಮಾತ್ರೆ ತೆಗೆದುಕೊಳ್ಳಲು ಇದು ಸರಿಯಾದ ಸಮಯವಲ್ಲ. ನಿಮಗೆ ಕೊರೋನಾ ಸೋಂಕು ತಗುಲಿದ್ದರೆ, ನಿಮ್ಮ ಮನೆಯವರಿಗೂ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರು ಹೆಚ್ಚಾಗಿ ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದವರು ಮತ್ತು ಹಿರಿಯ ನಾಗರಿಕರು. ಆದುದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಮತ್ತು ಹಿರಿಯ ನಾಗರಿಕರ ಬಗ್ಗೆ ಕಾಳಜಿ ಇರಲಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.








