ನವದೆಹಲಿ : ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ರಾಜೀವ್ ಗಾಂಧಿ ಅವರು ಅಡಿಪಾಯ ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾತನಾಡಿದ ದಿಗ್ವಿಜಯ್ ಸಿಂಗ್, ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಡಿಪಾಯ ಹಾಕಲಾಗಿದೆ. ರಾಜೀವ್ ಗಾಂಧಿ ಅವರು ಈ ಹಿಂದೆ ಈ ಕೆಲಸ ಮಾಡಿದ್ದು, ಅವರು ಕೂಡ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಭೂಮಿ ಪೂಜೆ ಕಾರ್ಯಕ್ರಮದ ಮುಹೂರ್ತ ಅಶುಭ…
ಮುಂದುವರಿದು, ಭೂಮಿ ಪೂಜೆ ಕಾರ್ಯಕ್ರಮದ ಮುಹೂರ್ತ ಅಶುಭ ಎಂದಿರುವ ದಿಗ್ವಿಜಯ್ ಸಿಂಗ್, ಆಗಸ್ಟ್ 5ರಂದು ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮದ ಮುಹೂರ್ತ ಅಶುಭವಾಗಿದ್ದು, ಸತಾತನ ಧರ್ಮದ ನಿಯಮ ನಿರ್ಲಕ್ಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ದಿನಾಂಕದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿಕೊಂಡರು.
ನೂರಾರು ವರ್ಷದ ಹೋರಾಟದ ಫಲವಾಗಿ ಈ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಅದರ ಬಗ್ಗೆ ಪ್ರಧಾನಿಯವರು ಮತ್ತೊಮ್ಮೆ ಪರಾಮರ್ಶೆ ನಡೆಸಬೇಕು. ಜತೆಗೆ ಬಿಜೆಪಿ ಅನೇಕ ಮುಖಂಡರು ಕೋವಿಡ್ ಸೋಂಕಿಗೊಳಗಾಗುತ್ತಿದ್ದು, ಭೂಮಿ ಪೂಜಾ ಕಾರ್ಯಕ್ರಮ ಮುಂದೂಡಿಕೆ ಮಾಡಬೇಕು ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.