ಮಹಿಳೆಗೆ ಕಿರುಕುಳ ನೀಡಿದ ಆರೋಪ- ರಾಖಿಯನ್ನು ಕಟ್ಟಿಸಿಕೊಳ್ಳುವ ಶಿಕ್ಷೆ ವಿಧಿಸಿದ ಕೋರ್ಟ್
ಇಂದೋರ್, ಅಗಸ್ಟ್ 3: ಮಧ್ಯಪ್ರದೇಶ ಹೈಕೋರ್ಟ್, ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ 26 ವರ್ಷದ ವಿವಾಹಿತ ವ್ಯಕ್ತಿಗೆ, ರಕ್ಷಾ ಬಂಧನದ ದಿನವಾದ ಸೋಮವಾರ ಆಕೆಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವಂತೆ ಆದೇಶಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಸಹೋದರರು ಸಹೋದರಿಗೆ ನೀಡುವ ಉಡುಗೊರೆಯಾಗಿ 11,000 ರೂಪಾಯಿಯನ್ನು ಆಕೆಗೆ ನೀಡಿ ಹಾರೈಸುವಂತೆ ಸೂಚನೆ ನೀಡಿದೆ.
ನ್ಯಾಯಮೂರ್ತಿ ರೋಹಿತ್ ಆರ್ಯ ಅವರ ಏಕ ಪೀಠವು ಜುಲೈ 30 ರಂದು ಆರೋಪಿ ವಿಕ್ರಮ್ ಬಾಗ್ರಿ ಅವರಿಗೆ ಷರತ್ತುಬದ್ಧ ಜಾಮೀನು ನೀಡುವ ಆದೇಶವನ್ನು ಅಂಗೀಕರಿಸಿದ್ದು, ಅರ್ಜಿದಾರನು ತನ್ನ ಪತ್ನಿಯೊಂದಿಗೆ ರಕ್ಷಾ ಬಂಧನದ ದಿನವಾದ ಅಗಸ್ಟ್ 3 ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಸಿಹಿತಿಂಡಿಗಳ ಪೊಟ್ಟಣದೊಂದಿಗೆ ರಾಖಿ ದಾರ / ಬ್ಯಾಂಡ್ ನೊಂದಿಗೆ ದೂರುದಾರಳ ಮನೆಗೆ ಭೇಟಿ ನೀಡಬೇಕು. ಮತ್ತು ರಾಖಿ ಕಟ್ಟುವಂತೆ ದೂರುದಾರಳ ಬಳಿ ವಿನಂತಿಸಬೇಕು. ಎಲ್ಲಾ ಸಮಯದಲ್ಲೂ ಆಕೆಯನ್ನು ರಕ್ಷಿಸುವ ಭರವಸೆಯೊಂದಿಗೆ 11,000 ರೂ.ಗಳನ್ನು ಉಡುಗೊರೆಯಾಗಿ ನೀಡಿ ಹಾರೈಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಏಪ್ರಿಲ್ 20 ರಂದು ಇಂದೋರ್ ನಿಂದ 55 ಕಿ.ಮೀ ದೂರದಲ್ಲಿರುವ ಉಜ್ಜಯಿನಿಯಲ್ಲಿರುವ 30 ವರ್ಷದ ಮಹಿಳೆಯ ಮನೆಗೆ ಪ್ರವೇಶಿಸಿದ ಆರೋಪದ ಮೇಲೆ ಬಾಗ್ರಿ ವಿರುದ್ಧ ಐಪಿಸಿಯ ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇದೇ ವೇಳೆ ರಕ್ಷಾ ಬಂಧನದ ದಿನ ಸಹೋದರ ನೀಡುವ ಉಡುಗೊರೆಯಾಗಿ 11,000 ನೀಡಬೇಕು ಎಂದು ಆದೇಶಿಸಿದ ನ್ಯಾಯಾಲಯ 50,000 ವೈಯಕ್ತಿಕ ಬಾಂಡ್ ಬರೆಸಿಕೊಂಡು ಬಾರ್ಗಿಗೆ ಜಾಮೀನು ಮಂಜೂರು ಮಾಡಿತು