ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆಯುತ್ತಿದೆ.
ಈ ಬೆಳವಣಿಗೆಗಳ ನಡುವೆಯೇ ಸುಶಾಂತ್ ಸಾವನ್ನಪ್ಪಿ 40 ದಿನಗಳ ನಂತರ ತಂದೆ ಎಂ.ಕೆ ಸಿಂಗ್ ಮೌನ ಮುರಿದಿದ್ದಾರೆ.
ಇಂದು ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಶಾಂತ್ ತಂದೆ ಎಂ.ಕೆ ಸಿಂಗ್, ನನ್ನ ಮಗ ಮೃತಪಟ್ಟು 40 ದಿನಗಳೇ ಕಳೆದು ಹೋಗಿವೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ನನ್ನ ಮಗನ ಸಾವಿಗೂ ಮುನ್ನ ಅಂದರೆ ಫೆಬ್ರವರಿ 25ರಂದೇ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದೆ. ನನ್ನ ಮಗನ ಜೀವಕ್ಕೆ ಅಪಾಯವಿದೆ, ಕ್ರಮಕೈಗೊಳ್ಳಿ ಎಂದು ಲಿಖಿತ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, ಜೂನ್.14ರಂದು ನನ್ನ ಮಗ ಮೃತಪಟ್ಟಿದ್ದಾನೆ. ಫೆಬ್ರವರಿ 25ರಂದು ನಾನು ಕೊಟ್ಟ ದೂರಿನ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕೇಳಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಂ.ಕೆ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಮಗನ ಸಾವಿಗೆ ಕಾರಣರಾದ ಪ್ರಮುಖ ಆರೋಪಿ ಓಡಿ ಹೋಗಲು ಬಿಟ್ಟಿದ್ದಾರೆ. ಅವರು ಆರಾಮಾವಾಗಿ ಓಡಾಡಿಕೊಂಡಿದ್ದಾರೆ ಎನ್ನುವ ಮೂಲಕ ಸುಶಾಂತ್ ಸಿಂಗ್ ರಜಪೂತ್ರ ಸ್ನೇಹಿತೆ ರಿಯಾ ಚಕ್ರವರ್ತಿ ಮೇಲೆ ಎಂ.ಕೆ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ. ಜತೆಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಾವಿನ ಬಗ್ಗೆ ಮುಂಬೈ ಹಾಗೂ ಬಿಹಾರ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವುದು ತನಿಖೆಯ ಹಾದಿಗೆ ಮತ್ತಷ್ಟು ಗೊಂದಲ, ಗೋಜಲಾಗುವಂತೆ ಮಾಡಿದೆ. ಸಿಬಿಐ ತನಿಖೆಗೆ ನೀಡುವಂತೆ ನಟ ಶೇಖರ್ ಸುಮನ್ ಬಿಹಾರ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಸುಶಾಂತ್ ತಂದೆ ಮನವಿ ಮಾಡಿದರೆ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಹಾರ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಸಿಬಿಐ ತನಿಖೆ ಪ್ರಸ್ತಾಪವನ್ನು ಮಹಾರಾಷ್ಟ್ರದ ಗೃಹ ಸಚಿವ ತಳ್ಳಿ ಹಾಕಿದ್ದು, ಈ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.








