ರಾಮ ಮಂದಿರ ಅಭೂತಪೂರ್ವ ಭದ್ರತಾ ವ್ಯವಸ್ಥೆ – ಭದ್ರತಾ ಕೋಡ್ ಇರುವ ಆಮಂತ್ರಣ ಪತ್ರಿಕೆ
ಅಯೋಧ್ಯೆ, ಅಗಸ್ಟ್ 4: ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಗೆ ಬುಧವಾರ ಪೂರ್ವಭಾವಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಆಗಸ್ಟ್ 5 ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರೈ, ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿಸುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಆಮಂತ್ರಣ ಪತ್ರಿಕೆ ಬಗ್ಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುದ್ರಣಗೊಂಡಿರುವ ಕಾರ್ಡ್‌ಗಳಿಗೆ ಭದ್ರತಾ ಕೋಡ್ ಇದ್ದು, ಅದು ಒಮ್ಮೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಯೋಧ್ಯೆಯ ಒಳಗೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಮತ್ತು ಬ್ಯಾಗ್ಗಳನ್ನ ತರಲು ಅವಕಾಶವಿಲ್ಲ. ಯಾವುದೇ ಪಾಸ್ಗಳನ್ನು ಕೂಡ ನೀಡುವುದಿಲ್ಲ ಜೊತೆಗೆ ಯಾವುದೇ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಿಲ್ಲ ಎಂದು ತಿಳಿಸಿದ್ದಾರೆ.
175 ಮಂದಿಗೆ ಆಹ್ವಾನ ನೀಡಲಾಗಿದ್ದು, ಅವರಲ್ಲಿ 135 ಮಂದಿ ಸಂತರು ಮತ್ತು 35 ಗಣ್ಯರು ಸೇರಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ
ಬೆಳಗ್ಗೆ 10.30ರ ಸಮಯಕ್ಕೆ ಎಲ್ಲಾ ಅತಿಥಿಗಳು ಆಗಮಿಸುವ ನಿರೀಕ್ಷೆ
ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ
ಪ್ರಧಾನಿ ಮೋದಿ ಮೊದಲಿಗೆ ಹನುಮಂಗಹ್ರಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ
ನಂತರ ಪೂಜೆ ನಡೆಯುವ ರಾಮ ಜನ್ಮಭೂಮಿ ಸ್ಥಳಕ್ಕೆ ಆಗಮನ ನಂತರ ಭೂಮಿ ಪೂಜೆ ಮತ್ತು ವೇದಿಕೆ ಕಾರ್ಯಕ್ರಮ ನೆರವೇರಲಿದೆ
ಪ್ರಧಾನಿ ನರೇಂದ್ರ ಮೋದಿ ಅವರು 5 ರೂ ಮೌಲ್ಯದ ಸ್ಟಾಂಪ್, ರಾಮ ಮಂದಿರದ ಹೊಸ ಮಾದರಿ ನಾಳೆ ಬಿಡುಗಡೆ ಮಾಡಲಿದ್ದಾರೆ