ಕಲಬುರಗಿ: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ಆದರೆ, ಕೊರೊನಾ ಸರ್ಕಾರಕ್ಕೆ ಹಣ ಲೂಟಿ ಮಾಡಲು ಹಬ್ಬವಾಗಿದೆ. ಪ್ರತಿಯೊಬ್ಬ ಮಂತ್ರಿ ಇದರಲ್ಲಿ ನನಗೆ ಏನು ಸಿಗ್ತದೆ ಎಂದು ಚಿಂತನೆ ಮಾಡುತ್ತಿದ್ದಾರೆ. ದುಡ್ಡು ಹೊಡೆಯೋದಕ್ಕೆ ನಾವು ಸಹಕಾರ ಕೊಡಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಡಿಕೆಶಿ, ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಗಿಯಿತು. ನಾವು 21 ದಿನಗಳಲ್ಲಿ ಕೊರೊನಾ ನಿಯಂತ್ರಣ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದ್ರೆ, 120 ದಿನವಾದ್ರೂ ಯಾವುದೇ ಸುಧಾಕಣೆ ಆಗಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿ ರಾಜ್ಯದ ಸಾವಿರಾರು ಜನರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿನಿಂದ ಬಳಲುತ್ತಿರುವ ನಾಯಕರು ಹಾಗೂ ಜನರು ಶೀಘ್ರ ಗುಣಮುಖರಾಗಲಿ ಎಂದು ಗಾಣಗಾಪುರದ ಶ್ರೀಗುರು ದತ್ತನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಡಿಕೆಶಿ ತಿಳಿಸಿದರು.
ಕೊರೊನಾ ಕಿಟ್ ಖರೀದಿಯಲ್ಲಿ ಸರ್ಕಾರ ಹಣ ಲೂಟಿ ಮಾಡಿದೆ. ಒಂದು ವೇಳೆ ನಮ್ಮ ಸರ್ಕಾರ ಅಂತಹ ಕೆಲಸ ಮಾಡಿದ್ರೆ ತನಿಖೆ ಮಾಡಲಿ, ನಾವು ರೆಡಿ ಎಂದು ಸವಾಲು ಹಾಕಿದರು.
ನೋಟಿಸ್, ಬೆದರಿಕೆಗೆ ಜಗ್ಗಲ್ಲ..!
ಕೊರೊನಾ ಕಿಟ್ ಖರೀದಿಗೆ ಆರೋಪ ಮಾಡಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್, ಬೆದರಿಕೆಗೆ ನಾವು ಬಗ್ಗಲ್ಲ ಜಗ್ಗಲ್ಲ. ನಿಮ್ಮ ನೋಟಿಸ್ಗೆ ಹೆದರಲ್ಲ. ನಮ್ಮ ಬಾಯಿ ಮುಚ್ಚಿಸಲು ನಿಮ್ಮ ಹಣೆಯಲ್ಲೂ ಬರೆದಿಲ್ಲ. ಯಾರು ತಪ್ಪು ಮಾಡಿದ್ದರೋ ಅವರಿಗೆ ಶಿಕ್ಷೆಯಾಗಲಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿರುವ ಡಿ.ಕೆ ಶಿವಕುಮಾರ್, ಮೊದಲು ಗಾಣಗಾಪುರಕ್ಕೆ ತೆರಳಿ ಶ್ರೀಗುರು ಸತ್ತನ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಲಬುರಗಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.








