ಹುಬ್ಬಳ್ಳಿ : ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ನಡೆಯಲಿದೆ. ಈ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಕನಸಾಗಿತ್ತು. ಅದು ಸಾಕಾರಗೊಳ್ಳುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ದೇಶದ ಜನರ ಕನಸಾಗಿತ್ತು. ನಾಳೆಯ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆಯಲ್ಲಿ ಭಾಗವಹಿಸಿದ ಕ್ಷಣ ನನಗೆ ಸಾರ್ಥಕ ಎನಿಸಿದೆ. ಅಂದಿನ ರಥಯಾತ್ರೆಯ ಹುಬ್ಬಳ್ಳಿ ಕಾರ್ಯಕ್ರಮದ ನೇತೃತ್ವವನ್ನು ನಾನೇ ವಹಿಸಿಕೊಂಡಿದ್ದೆ. ಆಗ ತಾನೇ ನಾನು ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದೆ. ಅಡ್ವಾಣಿಯವರ ರಥಯಾತ್ರೆ ನನ್ನ ಜೀವನದಲ್ಲಿ ಮರೆಯಗಲಾದ ಕ್ಷಣ ಎಂದರು.
ಇನ್ನು ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿಯವರ ಕೊಡುಗೆ ಅಪಾರವಿದೆ. ಮಂದಿರ ನಿರ್ಮಾಣದ ವಿಚಾರದಲ್ಲಿ ಕೆಲ ರಾಜಕೀಯ ಪಕ್ಷಗಳು ಸಂಘರ್ಷ ಮಾಡಿದ್ದವು. ಆದ್ರೆ ನಾವು ಅಂದು ಮಂದಿರ ನಿರ್ಮಾಣ ಮಾಡುತ್ತೇವೆಂದು ಹೇಳಿದ್ದೆವು. ಅದನ್ನು ಮಾಡಿ ತೋರಿಸಿದ್ದೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.