ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೊದಲಿಗೆ ನೆಪೋಟಿಸಮ್, ಮೋವಿ ಮಾಫಿಯಾ ಅಂತ ಶುರುವಾಗಿ ತದನಂತರ ಬಾಲಿವುಡ್ ಘಟಾನುಘಟಿಗಳ ಮೇಲೆ ಶುರುವಾದ ಅನುಮಾನ ತದನಂತರದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರಬೊರ್ತಿ ವಿರುದ್ಧ ನೆಟ್ಟಿತ್ತು. ಇದೀಗ ಈ ಲಿಸ್ಟ್ ಗೆ ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿದ್ದು, ಆಳಕ್ಕೆ ಹೋದಷ್ಟು ಗೊಂದಲಗಳ ಗೂಡಾಗಿ ಮಾರ್ಪಾಡಾಗ್ತಿದೆ.
ಸುಶಾಂತ್ ಆತ್ಮಹತ್ಯೆಗೆ ಕರಣ್ ಜೋಹರ್, ಮಹೇಶ್ ಭಟ್, ರಿಯಾ ಚಕ್ರವರ್ತಿ ಕಾರಣ ಎನ್ನಲಾಗಿತ್ತು. ನಂತರ ಈ ಪ್ರಕರಣಕ್ಕೆ ರಾಜಕೀಯ ಸಂಪರ್ಕ ಇದೆಯೆಂದು ಆರೋಪಿಸಿದ್ದ ನಟಿ ಕಂಗನಾ ರಣಾವತ್ ಅವರು ಮಹಾರಾಷ್ಟ್ರ ಸಿಎಂ ಪುತ್ರ ಆದಿತ್ಯ ಠಾಕ್ರೆ ವಿರುದ್ಧವೂ ಬೊಟ್ಟು ಮಾಡಿ ತೋರಿಸಿದ್ರು. ಆದ್ರೆ ಇದೀಗ ಕಹಾನಿಮೆ ಟ್ವಿಸ್ಟ್ ಅನ್ನೋ ಹಾಗೆ ಮತ್ತಿಬ್ಬರ ಹೆಸರು ಅನುಮಾನಿತರ ಪಟ್ಟಿಗೆ ಸೇರಿದೆ. 
ನಟ ಸೂರಜ್ ಪಂಚೋಲಿ ಹಾಗೂ ಡಿನೋ ಮರಿಯೋರ ವಿರುದ್ಧ ಇದೀಗ ಅನುಮಾನಗಳು ದಟ್ಟವಾಗಿದೆ. ಅಷ್ಟಕ್ಕೂ ಸುಶಾಂತ್ ಸಾವಿನ ಪ್ರಕರಣಕ್ಕೂ ಈ ನಟರಿಗೂ ಇರುವ ಲಿಂಕ್ ಏನು ಎನಿಸಬಹುದು. ಆದ್ರೆ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ ಅವರು ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಲೇ ಬೇಕು ಎಂದು ಆಗ್ರಹಿಸಿರೋದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಗ್ಗೆ ಮಾತನಾಡಿರುವ ನಾರಾಯಣ ರಾಣೆ ಅವರು ನಟ ಸೂರಜ್ ಪಂಚೋಲಿ ಮತ್ತು ಡಿನೋ ಮರಿಯೋ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ತಮ್ಮ ಆರೋಪಗಳಿಗೆ ಕಾರಣ ಕೊಟ್ಟಿರುವ ನಾರಾಯಣ ಅವರು “ಸುಶಾಂತ್ ಸಾವಿನ ದಿನ ಸೂರಜ್ ಪಂಚೋಲಿ ಮನೆಯಲ್ಲಿ ದೊಡ್ಡ ಪಾರ್ಟಿ ನಡೆದಿತ್ತು. ದೊಡ್ಡ-ದೊಡ್ಡ ಬಾಲಿವುಡ್ ನಟರು ಪಾರ್ಟಿಯಲ್ಲಿ ಹಾಜರಿದ್ರು. ಆ ದಿನ ಹಲವು ಸಚಿವರು ಸುಶಾಂತ್ ಸಿಂಗ್ ನಿವಾಸದ ಬಳಿಯೇ ಇರುವ ದಿನೋ ಮರಿಯೋ ನಿವಾಸಕ್ಕೆ ಭೇಟಿ ನೀಡಿದ್ದರು. ಕೆಲ ಸಮಯದ ನಂತರ ಕೆಲವರು ಸುಶಾಂತ್ ನಿವಾಸಕ್ಕೂ ತೆರಳಿದ್ದರು. ಇದಕ್ಕೆ ಏನು ಕಾರಣ” ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಮುಂಬೈ ಪೊಲೀಸರ ವಿರುದ್ಧ ಹರಿಹಾಯ್ದಿರುವ ನಾರಾಯಣ ಅವರು ಮುಂಬೈ ಪೋಲೀಸರು ಪ್ರಕರಣದಲ್ಲಿ ನೇರವಾಗಿ ಸಂಬಂಧಿಸಿದ ಕೆಲವರನ್ನು ಬಚಾವ್ ಮಾಡಲು ಹೊರಟಿದ್ದಾರೆ. ಪ್ರಕರಣ ಸಂಬಂಧ ಕೆಲವು ವಿಷಯಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಅಲ್ದೇ ಪ್ರಕರಣದ ಪ್ರಮುಖ ಆರೋಪಿ ರಿಯಾಳನ್ನು ಸಹ ಇನ್ನೂವರೆಗೂ ಬಂಧಿಸದೇ ಇರುವುದಕ್ಕೆ ಏನು ಕಾರಣ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೂ ಸುಶಾಂತ್ ಸಾವಿಗೂ ಸಂಬಂಧವಿದೆ. ದಿಶಾ ಸಾಲಿಯಾನ್ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.








