ಭಾಗಮಂಡಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ವಿ.ಸೋಮಣ್ಣ
ಮಳೆಯ ಅಬ್ಬರ ಮತ್ತು ಭೂಕುಸಿತದಿಂದ ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ನಲುಗಿ ಹೋಗಿದೆ. ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅದ್ರಲ್ಲೂ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದ ಕಾರಣ ತಲಕಾವೇರಿಯ ಪ್ರಧಾನ ಅರ್ಚರ ಕುಟುಂಬ ಭೂ ಸಮಾಧಿಯಾಗಿರುವುದು ಬಹುತೇಕ ಖಚಿತವಾಗಿದೆ.
ಜಲ ಮತ್ತು ಭೂ ಪ್ರವಾಹದಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಭೂ ಕುಸಿತದಿಂದ ಭೀತಿಯಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಅನಾಹುತ ಸಂಭವಿಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಚಿವ ವಿ. ಸೋಮಣ್ಣ ಜೊತೆ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ, ಮಡಿಕೇರಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ.
ಎನ್‍ಡಿಆರ್‍ಎಫ್ ತಂಡದೊಂದಿಗೆ ಅರ್ಚಕರ ಮನೆ ಕುಸಿದಿರುವ ಜಾಗಕ್ಕೂ ತೆರಳುವ ಸಾಧ್ಯತೆ ಇದೆ. ನಿರಂತರ ಮಳೆಯಿಂದಾಗಿ ತೆರವು ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಕೊಡಗು ಜಿಲ್ಲೆಯ ಸುಮಾರು 40 ಪ್ರದೇಶಗಳಲ್ಲಿ ಗುಡ್ಡಗಳು ಕುಸಿದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ರಸ್ತೆಗಳಿಗೆ ಮರ ಬಿದ್ದು ಸಂಚಾರಕ್ಕೂ ತೊಂದರೆಯಾಗುತ್ತಿದೆ. ಒಟ್ಟಾರೆ ಕುಂಭದ್ರೋಣ ಮಳೆಯಿಂದಾಗಿ ಮಡಿಕೆರಿ ಜನರು ಭಯದಿಂದ ಜೀವನ ಸಾಗಿಸುವಂತಾಗಿದೆ.
ಈ ನಡುವೆ ಮುಂದಿನ ಮೂರು ದಿನಗಳ ಕಾಲ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಮಡಿಕೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅನಾಹುತ ಸಂಭವಿಸಿದ್ದ ಸ್ಥಳಗಳಿಗೆ ಭೇಟಿ ನೀಡಿ ನೆರೆ ಪೀಡಿತ ಜನರ ಸಂಕಷ್ಟಕ್ಕೆ ಪರಿಹಾರ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.








