ಸೆಪ್ಟೆಂಬರ್ 1 ರಿಂದ ಶಾಲಾ-ಕಾಲೇಜು ಪುನರಾರಂಭ ಸಾಧ್ಯತೆ
ಹೊಸದಿಲ್ಲಿ, ಆಗಸ್ಟ್ 08: ಸೆಪ್ಟೆಂಬರ್ 1 ಮತ್ತು ನವೆಂಬರ್ 14 ರ ನಡುವೆ ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಹೊಸ ಮಾರ್ಗಸೂಚಿಗಳು ಆಗಸ್ಟ್ 31 ರಂದು ಹೊರಬರುವ ನಿರೀಕ್ಷೆಯಿದ್ದು, ಅಂತಿಮ ನಿರ್ಧಾರವನ್ನು ರಾಜ್ಯಗಳಿಗೆ ಬಿಡಲಾಗುತ್ತದೆ.
ಶಿಕ್ಷಣ ಸಂಸ್ಥೆಗಳ ಪುನರಾರಂಭದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕಾರ್ಯದರ್ಶಿಗಳ ಗುಂಪು ಚರ್ಚೆ ನಡೆಸಿದ್ದು, ಇದನ್ನು ಕೇಂದ್ರ ಸಚಿವ ಡಾ. ಹರ್ಷವರ್ಧನ್ ನೇತೃತ್ವದ ಕೋವಿಡ್-19 ಕುರಿತಾದ ಸಚಿವರ ಗುಂಪಿಗೆ ಸಲ್ಲಿಸಿದೆ.
ರಾಜ್ಯಗಳಿಗೆ ಆಗಸ್ಟ್ 31ರ ನಂತರ ಸೂಚಿಸಲಾಗುವ ಅನ್ಲಾಕ್ 4.0 ಮಾರ್ಗಸೂಚಿಯನ್ವಯ ಇದನ್ನು ಮಾರ್ಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ರಾಜ್ಯ ಸರ್ಕಾರಗಳೇ ಕೈಗೊಳ್ಳಲಿದೆ. ಜೊತೆಗೆ ಮಕ್ಕಳನ್ನು ತರಗತಿಗಳಿಗೆ ಹೇಗೆ ಮತ್ತು ಯಾವಾಗ ಕರೆತರಬೇಕು ಎ
ಯಾವಾಗ ಮತ್ತು ಹೇಗೆ ಮಕ್ಕಳನ್ನು ತರಗತಿಗಳಿಗೆ ಕರೆತರಬೇಕು ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ಕೈಗೊಳ್ಳಲಿವೆ.
ಹೊಸ ನಿಯಮಗಳ ಪ್ರಕಾರ, 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಮೊದಲ 15 ದಿನಗಳವರೆಗೆ ತಮ್ಮ ತರಗತಿ ಕೋಣೆಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಾರೆ. 10 ನೇ ತರಗತಿಯಲ್ಲಿ ನಾಲ್ಕು ವಿಭಾಗಗಳಿದ್ದರೆ, ಎ ಮತ್ತು ಸಿ ವಿಭಾಗಗಳ ಅರ್ಧದಷ್ಟು ವಿದ್ಯಾರ್ಥಿಗಳು ನಿರ್ದಿಷ್ಟ ದಿನಗಳಲ್ಲಿ ಬರಬೇಕಾಗುತ್ತದೆ, ಮತ್ತು ಉಳಿದ ದಿನಗಳಲ್ಲಿ ಉಳಿದವರು ಬರಬೇಕೆಂದು ವರದಿಗಳು ಹೇಳಿವೆ.
ಶಾಲಾ ಸಮಯ 5-6 ಗಂಟೆಗಳ ಬದಲು 2-3 ಗಂಟೆಗಳಿಗೆ ಸೀಮಿತಗೊಳಿಸಿ, ಎಲ್ಲಾ ಶಾಲೆಗಳು ಬೆಳಿಗ್ಗೆ 8 ರಿಂದ 11 ರವರೆಗೆ ಒಂದು ಶಿಫ್ಟ್ ಮತ್ತು ಮಧ್ಯಾಹ್ನ 12 ರಿಂದ 3 ರವರೆಗೆ ಮತ್ತೊಂದು ಪಾಳಿಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶಾಲೆಗಳನ್ನು ಶೇಕಡಾ 33 ರಷ್ಟು ಬೋಧನಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ತರಗತಿ ನಡೆಸಲು ಕೇಳಲಾಗುತ್ತದೆ.
ಈಗಾಗಲೇ, ಅಸ್ಸಾಂ ಸರ್ಕಾರ ಸೆಪ್ಟೆಂಬರ್ 1 ರಂದು ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯುವ ಪ್ರಾಥಮಿಕ ಯೋಜನೆಗಳನ್ನು ಸಿದ್ಧಪಡಿಸಿದ್ದು, ಅಂತಿಮ ನಿರ್ಧಾರವು ಕೇಂದ್ರದ ನಿರ್ದೇಶನಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.
ನಾವು ಶಾಲೆಗಳನ್ನು ಪುನಃ ತೆರೆಯುವ ಪ್ರಾಥಮಿಕ ಯೋಜನೆಯನ್ನು ರೂಪಿಸಿದ್ದೇವೆ ಆದರೆ ಇದು ಇನ್ನೂ ಪೋಷಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಹೆಚ್ಚಿನ ಚರ್ಚೆಗೆ ಮುಕ್ತವಾಗಿದೆ, ಮತ್ತು ಕೇಂದ್ರ ಸರ್ಕಾರದ ನಿರ್ದೇಶನದ ಅನುಸಾರ ಮಾತ್ರ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಕೂಡಲೇ ಮಾರ್ಚ್ 16 ರಿಂದ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ.