ಕೋಳಿಕ್ಕೋಡ್ : ಕೇರಳದ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಅವಘಡಕ್ಕೆ ಸಂಬಂಧಪಟ್ಟಂತೆ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಇದನ್ನು ಹೆಚ್ಚಿನ ತನಿಖೆಗಾಗಿ ಡಿಜಿಸಿಎ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಡಿಜಿಸಿಎ ತನಿಖಾ ತಂಡವು ಕಿರಿಯ ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಾಲೀಧ್ರಾನ್ ಅವರೊಂದಿಗೆ ಕೋಳಿಕ್ಕೋಡ್ ಆಗಮಿಸಿದ್ದು, ವಿಮಾನ ಪತನವಾದ ಸ್ಥಳದಲ್ಲಿ ತನಿಖೆಯನ್ನು ನಡೆಸುತ್ತಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ಗಾಯಗೊಂಡವರಲ್ಲಿ ಕನಿಷ್ಠ 20 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಕೆಲವರು ಬೆನ್ನುಹುರಿಗೆ ಗಾಯಗಳಾಗಿವೆ ಅಂತ ತಿಳಿದು ಬಂದಿದೆ. ಈ ಅಪಘಾತದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ 190 ಜನರಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ.








