1600 ಸಂವತ್ಸರ ಕಾಯುತ್ತಾ ಕುಳಿತಿರುವ ಕದಂಬರ ಕಾಲದ ಶಿಲಾಸಿಂಹ, ಮಲೆನಾಡಿನ ರೋಮಾಂಚಕ ಇತಿಹಾಸದ ನಮಗರಿವಿಲ್ಲದ ಸತ್ಯಗಳು
ಪಶ್ಚಿಮ ಘಟ್ಟದ ಮಲೆನಾಡಿನ ತಪ್ಪಲಿನಲ್ಲಿ ಇರುವ ತೀರ್ಥಹಳ್ಳಿ ಹಲವಾರು ನದಿಗಳು, ಹೊಳೆಗಳು, ತೊರೆಗಳು, ಹಳ್ಳಗಳಿಗೆ ಸಾಕ್ಷಿಯಾಗಿದೆ. ವಿಶ್ವದೆಲ್ಲೆಡೆಯಂತೆ ನಮ್ಮ ತೀರ್ಥಹಳ್ಳಿಯಲ್ಲಿಯು ಸಹಾ ಈ ನದಿಗಳ ದಡವೇ ಅನಾದಿಕಾಲದಿಂದಲೂ ಸಂಸ್ಕೃತಿ, ಪರಂಪರೆ, ಧಾರ್ಮಿಕ, ಕೃಷಿ ಮತ್ತು ನಾಗರಿಕತೆಯ ಪೋಷಕ. ತೀರ್ಥಹಳ್ಳಿಯ ಹಲವಾರು ಪ್ರದೇಶಗಳು ನವಶಿಲಾಯುಗ ಮತ್ತು ಕಬ್ಬಿಣದ ಯುಗಕ್ಕೆ ಸಾಕ್ಷಿಯಾದರೆ ಇನ್ನೊಂದು ಕಡೆ ಇನ್ನಷ್ಟು ಪ್ರದೇಶಗಳು ರಾಮಾಯಣ ಮತ್ತು ಮಹಾಭಾರತದ ಜೊತೆಗೆ ತಳಕು ಹಾಕಿಕೊಂಡಿದೆ. ತದನಂತರದಲ್ಲಿ ಮಲೆನಾಡು ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಳುಕ್ಯರು, ಹೊಯ್ಸಳರು, ವಿಜಯನಗರ ಮತ್ತು ಕೆಳದಿ (ಬಿದನೂರು) ನಾಯಕರ ಆಳ್ವಿಕೆಗೆ ಒಳಪಟ್ಟಿತ್ತು.
ಮೊದಲ ಕನ್ನಡ ಸಾಮ್ರಾಜ್ಯಯಂದು ಪ್ರಖ್ಯಾತವಾಗಿರುವ ಕದಂಬ ರಾಜ್ಯದ ಸಂಸ್ಥಾಪಕ ಮಯೂರವರ್ಮನ (345 – 365) ಆಳ್ವಿಕೆಯ ಕಾಲದಲ್ಲಿ ಮಲೆನಾಡಿನಲ್ಲಿ ಕನ್ನಡದ ಜೊತೆಗೆ ವೈಷ್ಣವ, ಶೈವ ಮತ್ತು ಸ್ಥಳೀಯ ಆಚಾರ ವಿಚಾರಗಳಿಗೆ ಮಾನ್ಯತೆ ಸಿಗುತ್ತದೆ. ಇವೆಲ್ಲದರ ಮಧ್ಯದಲ್ಲಿ ಕದಂಬರ ಕಾಲದಲ್ಲಿ ತೀರ್ಥಹಳ್ಳಿಯ ಅನೇಕ ಕಡೆ ಶ್ರೀ ನಾರಸಿಂಹಸ್ವಾಮಿ ದೇವರ ಪ್ರತಿಷ್ಟಾಪನೆ ಆಗುತ್ತದೆ. ಅದರಲ್ಲಿ ವಿಶೇಷವಾಗಿ ಮಾಲತಿ ಮತ್ತು ತುಂಗಾ ನದಿಯ ಸಂಗಮ ಕ್ಷೇತ್ರದಿಂದ ಇಂದಿನ ಕಲ್ಮನೆ ಕಮ್ಮರಡಿ ರಸ್ತೆಯವರೆಗಿನ ಪ್ರದೇಶವನ್ನು ಶ್ರೀ ನಾರಸಿಂಹ ದೇವರಿಗೆ ಮೀಸಲಿಟ್ಟು ಅಲ್ಲಿ ಒಂದು ಅಗ್ರಹಾರವನ್ನು ಸ್ಥಾಪಿಸುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ಇರುವ ಜಾಗವನ್ನು ಸಿಂಹ ರೂಪದಲ್ಲಿ ಸ್ಥಾಪಿಸಿರುವ ಶ್ರೀ ನಾರಸಿಂಹಸ್ವಾಮಿ ದೇವರಿಗೆ ಸರ್ವಮಾನ್ಯವಾಗಿ (rent free) ನೀಡಿದ ಪರಿಣಾಮವಾಗಿ ಈ ಕ್ಷೇತ್ರಕ್ಕೆ “ಕೊಡಲ” ಎಂದು ಕರೆಯಲ್ಪಡುತ್ತ ಇಲ್ಲಿನ ದೇವರಿಗೆ ಕೊಡಲ ನಾರಸಿಂಹದೇವರು ಮತ್ತು ಅಗ್ರಹಾರಕ್ಕೆ ಕೊಡಲ ಅಗ್ರಹಾರ ಎಂದು ನಾಮಕರಣ ಆಗುತ್ತದೆ.
ಕದಂಬರ ಸಿಂಹ:-
ಡಾ ಎಸ್.ಜಿ. ಸಾಮಕ್ (ಇತಿಹಾಸಕಾರರು) ಮತ್ತು ಎಸ್. ಮುರುಗನ್ (ಐ.ಪಿ.ಎಸ್) ಅವರ ಪ್ರಕಾರ ಆದಿ ಕಾಲದಿಂದಲೂ ಸಿಂಹ ಮನುಷ್ಯನ ಆಲೋಚನಾ ಕ್ರಮಗಳ ಮೇಲೆ ಮಹತ್ತರ ಪ್ರಭಾವ ಬೀರುತ್ತ ಬಂದಿದ್ದು ಅಂದಿನಿಂದ ಇಂದಿನವರೆಗೂ ಸಂಸ್ಕೃತಿ, ಜನಾಂಗ ಮತ್ತು ರಾಷ್ಟ್ರೀಯತೆಗಳ ಮೇಲೆ ಸಿಂಹ ಬೀರಿರುವ ಪ್ರಭಾವಶಾಲಿತ್ವವನ್ನು ವಿಶೇಷವಾಗಿ ನಾವು ಗುರುತಿಸ ಬಹುದು. ಕ್ರಿ.ಪೂ ೩ನೇ ಶತಮಾನದಲ್ಲಿ ಮೌರ್ಯ ಅರಸ ಸಾಮ್ರಾಟ್ ಅಶೋಕನ ಆಳ್ವಿಕೆಯಲ್ಲಿ ಸಿಂಹ ಲಾಂಛನವನ್ನು ನಾವು ಮೊದಲ ಬಾರಿ ಕಾಣುತ್ತೇವೆ. ನಂತರದ ಕಾಲದಲ್ಲಿ ಕುಶಾನರು, ಶಾತವಾಹನರು ಮತ್ತು ಗುಪ್ತರು ಸಿಂಹ ಪ್ರತಿಮೆಗಳನ್ನು ಹೆಚ್ಚೆಚ್ಚಾಗಿ ಸ್ಥಾಪಿಸುತ್ತ ನಡೆದರು. ಡಾ ಎಸ್.ಜಿ. ಸಾಮಕ್ ಅವರ ಅಭಿಪ್ರಾಯದಲ್ಲಿ ಶಾತವಾಹನರ ಕಾಲದ ಸಿಂಹಾಕೃತಿಗಳ ಪ್ರಭಾವ ಕದಂಬರ ಸಿಂಹಗಳ ಮೇಲೆ ಸ್ಪಷ್ಟವಾಗಿ ಆಗಿದ್ದು ಇಲ್ಲಿ ಸಿಂಹ ಲಾಂಛನವು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಪರಿಭಾಷೆಗಳ ಸಾಂಕೇತಿಕ ರೂಪಕವಾಗಿ ಬಳಕೆಗೊಳ್ಳುತ್ತಾ ಬಂದಿದೆ.
ಸಿಂಹ ರೂಪಿ ಕೊಡಲ ಶ್ರೀ ನಾರಸಿಂಹ ದೇವರ ಇತಿಹಾಸ:-
ಇಂದಿನ ಕಲ್ಮನೆ ಕಮ್ಮರಡಿ ರಸ್ತೆಯಿಂದ ಮಾಲತಿ ಮತ್ತು ತುಂಗಾ ನದಿಗಳ ಸಂಗಮ ಕ್ಷೇತ್ರದ ಮಧ್ಯದಲ್ಲಿ ಇರುವ ಸರಿಸುಮಾರು 2೦೦೦ ಎಕರೆ ಪ್ರದೇಶವನ್ನು ಸಿಂಹ ರೂಪಿಯಾಗಿ ಶ್ರೀ ನಾರಸಿಂಹ ದೇವರು ಕಾಯುತ್ತಿರುವುದು ವಿಶೇಷ. ಈ ಪ್ರದೇಶದಲ್ಲಿ ಕೊಡಲ ಕೆರೆ, ಭೋಗಾರುಕೊಪ್ಪ ಕೆರೆ, ಗೋಮಾಳ, ಶ್ರೀ ಶಿವಲಿಂಗ, ನಂದಿ, ಗಣಪತಿ, ಸಪ್ತಮಾತೃಕೆಯರು, ಬಸವಣ್ಣ ದೇವಾಲಯ, ಭಗ್ನಗೊಂಡ ಶಿವಲಿಂಗ, ಬಸವನ ಕೊಂಡ, ರಥ ಮತ್ತು ಬಂಡಿ ನಿಲ್ಲುವ ಸ್ಥಳ, ಶಾಸನ, ವೀರಗಲ್ಲು, ಗದ್ದೆ, ಬೈಲು, ಮಕ್ಕಿಹಕ್ಕಲು, ತೋಟ, ತುಡಿಕೆ, ಗೋಶಾಲೆ, ಅಗ್ರಹಾರ, ನಿಧಿನಿಕ್ಷೇಪ ಮತ್ತು ಕಾಡು ಇದ್ದವು. ಈ ಭಾಗದಲ್ಲಿ ಅಂದು ಹಲವಾರು ಖಾನನಗಳು ಇದ್ದು ಅದರಲ್ಲಿ ವಿಶೇಷವಾಗಿದ್ದು ದೇವಿ ಖಾನ್.
ಇನ್ನೂ ಇಲ್ಲಿಯ ಬಸವಣ್ಣ ದೇವಾಲಯದ ಅಧ್ಯಕ್ಷರಾಗಿರುವ ಶ್ರೀ ಕೊಡಲ ರವಿಯವರ ಪ್ರಕಾರ ಅವರು ಶಾಲೆಯಲ್ಲಿ ಓದುವಾಗ ಈಗಿರುವ ಕದಂಬರ ಸಿಂಹ ಇರುವ ಜಾಗದಲ್ಲಿ ಹಳೆಯ ದೇವಸ್ಥಾನದ ಅವಶೇಷಗಳ ಕೆಳಗೆ ಈ ಸಿಂಹ ಹೂತು ಹೋಗಿದ್ದು ಈ ನಾರಸಿಂಹ ದೇವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂದು ಹೇಳುತ್ತಾರೆ. ಇನ್ನೂ ರವಿಯವರು ಶಾಲೆಯಲ್ಲಿ ಓದುವಾಗ ಅಂದರೆ 1972ರ ಆಸುಪಾಸಿನಲ್ಲಿ ಒಮ್ಮೆ ಅರಣ್ಯ ಇಲಾಖೆಯವರು ಈ ಪ್ರದೇಶದಲ್ಲಿ ಬಿದ್ದಿರುವ ಮರಗಳನ್ನು ಸಾಗಿಸಲು ಬಂದಾಗ ಈ ಸಿಂಹನ ತಲೆಯ ಭಾಗ ಗೋಚರಿಸುತ್ತದೆ, ಆಗ ಅಲ್ಲೆ ಇದ್ದ ಕೆಲವು ಹಿರಿಯರು ಆನೆಗಳ ಮೂಲಕ ಈ ಭವ್ಯವಾದ ಕದಂಬರ ಕಾಲದ ಸಿಂಹವನ್ನು ಹೊರತೆಗೆದು ಹೂತು ಹೋಗಿದ್ದ ಜಂಬು ಇಟ್ಟಿಗೆಯ ಅಡಿಪಾಯದ ಮೇಲೆ ಇಡುತ್ತಾರೆ. 3೦’೦” ಅಡಿ ಉದ್ದ 15’೦” ಅಡಿ ಅಗಲದ ಜಂಬು ಇಟ್ಟಿಗೆಯ ಅಡಿಪಾಯದ ಮೇಲೆ ಪೂರ್ವಾಭಿಮುಖವಾಗಿ (ಹೇಗೆ ಸಿಕ್ಕಿತು ಅದೇ ದಿಕ್ಕಿನಲ್ಲಿ) ಇಡಲಾಗಿರುವ ಈ ಸಿಂಹ ಮಾಲತಿ ಮತ್ತು ತುಂಗಾ ನದಿಯ ಸಂಗಮ ಕ್ಷೇತ್ರದಿಂದ ಸುಮಾರು 3.77 ಕಿಲೋಮೀಟರ್ ದೂರದಲ್ಲಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಶೇಷವಾದ ಅಂಶ ಏನೆಂದರೆ ಸಿಂಹ ಇರುವ ಜಾಗದಿಂದ ನದಿಗಳ ಸಂಗಮ ಕ್ಷೇತ್ರದವರೆಗೂ ಒಂದು ಗೆರೆಯನ್ನು ಎಳೆದರೆ ಸಿಂಹ, ಶಿವಲಿಂಗ, ನಂದಿ, ಬಸವಣ್ಣ ದೇವಾಲಯ ಎಲ್ಲವೂ ನೇರವಾಗಿ ಇರುವುದು ಕಂಡುಬರುತ್ತದೆ.
ಈ ಸಿಂಹವನ್ನು ಹೊರತೆಗೆದ ಸ್ವಲ್ಪ ದಿನಗಳ ನಂತರದಲ್ಲಿ ಅ. ಸುಂದರ (ಪುರಾತತ್ವ ತಜ್ಞರು) ಅವರು ಈ ಪ್ರದೇಶಕ್ಕೆ ಭೇಟಿ ನೀಡಿ ಇದು ಕದಂಬರ ಕಾಲದ 4 ಅಥವಾ 5 ಶತಮಾನದ ಮೊದಲ ಕಾಲಘಟ್ಟದ್ದಾಗಿದು, ಸಿಂಹವನ್ನು ನಾರಸಿಂಹ ರೂಪದಲ್ಲಿ ಪೂಜಿಸುವ ಪ್ರಥಮ ಹಂತದ ಕಾಲಮಾನಕ್ಕೆ ಸೇರಿದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಈ ಸಿಂಹ ಇರುವ ಜಾಗವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸುಮಾರು ಒಂದು ಎಕರೆ ಅಷ್ಟು ವಿಶಾಲವಾದ ದಿಬ್ಬದ ಮೇಲೆ ಇದ್ದ ಹಾಗೆ ಗೋಚರಿಸುತ್ತದೆ. ಇದರ ಅರ್ಥ ಈ ಹಿಂದೆ ಈ ಸಿಂಹ ರೂಪಿ ನಾರಸಿಂಹ ದೇವರ ದೇವಾಲಯದ ಅವಶೇಷಗಳಿಂದ ಸೃಷ್ಟಿ ಆಗಿರುವ ದಿಬ್ಬದ ಮೇಲೆ ಈಗ ಕೇವಲ ಸಿಂಹ ನಿಂತಿರುವುದು ಗೊತ್ತಾಗುತ್ತದೆ. ಇನ್ನೂ ಪ್ರೊ. ಜಿ.ಕೆ. ದೇವರಾಜಸ್ವಾಮಿ (ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಇತಿಹಾಸ ಅಕಾಡೆಮಿ (ರಿ), ಬೆಂಗಳೂರು) ಅವರ ಅಭಿಪ್ರಾಯದಲ್ಲಿ ನಮ್ಮ ಮಲೆನಾಡಿನಲ್ಲಿ ಹಲವಾರು ಕಡೆ ಹುಲಿಯನ್ನು (ಮೂರ್ತಿ) ಕಾಡಿನಲ್ಲಿ ಕೂರಿಸಿ ಆ ಕಾಡಿಗೆ ಹುಲಿ ಬನ ಎಂದು ನಾಮಕರಣ ಮಾಡಿ ಅದಕ್ಕೆ ಹರಕೆ ಹೊರುವ ಪದ್ಧತಿ ಜಾರಿಯಲ್ಲಿ ಇತ್ತು. ಕಾಡಿಗೆ ಮೇಯಲು ಹೋದ ಹಸುಗಳು ಹುಲಿಗೆ ಆಹಾರವಾಗುವುದನ್ನು ತಪ್ಪಿಸಲು ಈ ವಿಶಿಷ್ಠವಾದ ಪದ್ಧತಿಯನ್ನು ಮಲೆನಾಡಿಗರು ಮಾಡುತ್ತಿದ್ದು ತೀರ್ಥಹಳ್ಳಿಯ ಸುತ್ತಮುತ್ತಲೂ ಬಹಳಷ್ಟು ಇಂತಹ ಶಿಲ್ಪಗಳಿದ್ದು (ಹುಲಿಯ) ಅವುಗಳನ್ನು ಹುಲಿದೇವರೆಂದು ಪೂಜಿಸುತ್ತಾರೆ. ಹುಲಿ ಹೆಸರು ಸ್ಥಳನಾಮ ಬರುವಲ್ಲಿ ಅಂದರೆ ಉದಾಹರಣೆಗೆ
ಮೇಗರವಳ್ಳಿ ಸಮೀಪ ಮತ್ತು ಕಲ್ಮನೆ ವೃತ್ತದ ಸಮೀಪ ಹುಲಿ ದೇವಾಲಯವಿರುವುದನ್ನು ಗಮನಿಸಬಹುದು. ಆದರೆ ಕೊಡಲ ಕದಂಬ ಸಿಂಹವನ್ನು ನಾರಸಿಂಹ ದೇವರ ರೂಪದಲ್ಲಿ ಪೂಜಿಸುವುದನ್ನು ಇಲ್ಲಿ ದೊರೆತ ಶಾಸನದ ಮೂಲಕ ತಿಳಿಯುತ್ತದೆ.
ಕೊಡಲ ಸಿಂಹದ ಪ್ರತಿಮಾಶಾಸ್ತ್ರ:-
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪಶ್ಚಿಮ ಘಟ್ಟದ ಕಾಡು ಸಿಂಹಗಳ ವಾಸ ಸ್ಥಾನ ಅಲ್ಲ, ಇಲ್ಲಿ ಏನಿದ್ದರೂ ಹುಲಿಯ ದರ್ಬಾರ್. ಆದರೆ ಈ 1600 ವರ್ಷದ ಪುರಾತನ ಸಿಂಹವನ್ನು ಒಮ್ಮೆ ನೋಡಿದರೆ ಈ ಶಿಲ್ಪವನ್ನು ಕೆತ್ತಿದ ಶಿಲ್ಪಿಗೆ ಸಿಂಹಗಳ ಭೌತಿಕ ಲಕ್ಷಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಸ್ಪಷ್ಟಪಡಿಸುತ್ತದೆ. ಹಾಗಾದರೆ ಈ ಶಿಲ್ಪಿ ಸಿಂಹವನ್ನು ಎಲ್ಲಿ ನೋಡಿದ ಅನ್ನುವುದೆ ಯಕ್ಷ ಪ್ರಶ್ನೆ, ಅಂದಿನ ಕಾಲದಲ್ಲಿ ಇಂದಿನ ತರಹವೇ ಮೃಗಾಲಯ ಇತ್ತಾ ಅಥವಾ ಕದಂಬ ಅರಸರು ಸಿಂಹವನ್ನು ದೂರದ ದೇಶದಿಂದ ತರಿಸಿ ಸಾಕಿದರೆ ಅನ್ನುವ ಪ್ರಶ್ನೆ ಕಾಡುತ್ತದೆ. ಈ ಸಿಂಹವನ್ನು ಒಂದೇ ಕಲ್ಲಿನಲ್ಲಿ ಕೆತ್ತಿದ್ದು ಇದು 3’6″ ಅಡಿ ಎತ್ತರ, 2’೦” ಅಡಿ ಅಗಲ ಮತ್ತು 6’9″ ಅಡಿ ಸುತ್ತಳತೆ (ಸೊಂಟದ ಕೆಳಭಾಗದ ಹತ್ತಿರ) ಹೊಂದಿದೆ. ಈ ಸಿಂಹಕ್ಕೆ ಮುಂಭಾಗದ ಪಂಜರದಲ್ಲಿ ನಾಲ್ಕು ಕಾಲ್ಬೆರಳುಗಳು ಇದ್ದು ಐದನೆಯ ಇಬ್ಬನಿ ಪಂಜ (Dew Claw) ಸ್ವಲ್ಪ ಮೇಲೆ ಇರುವುದನ್ನು ಕಾಣಬಹುದು. ಇನ್ನೂ ಹಿಂದಿನ ಪಂಜರದಲ್ಲಿ ನಾಲ್ಕು ಕಾಲ್ಬೆರಳುಗಳು ಮತ್ತು ಅದರ ಉಗುರು ಸ್ಪಷ್ಟವಾಗಿ ಕಾಣುತ್ತದೆ. ಸಿಂಹಕ್ಕೆ ಮೂರು ಬಗೆಯ ಹಲ್ಲುಗಳು ಇದ್ದು ಅವುಗಳನ್ನು ಬಾಚಿ (Incisors), ಕೋರೆ (Canines) ಮತ್ತು ಕಾರ್ನಾಸಿಯಲ್ (Carnassial) ಹಲ್ಲುಗಳು ಎಂದು ಕರೆಯುತ್ತಾರೆ. ಕೊಡಲ ಸಿಂಹದಲ್ಲಿ ಸ್ಪಷ್ಟವಾಗಿ ರೇಖಾಕೃತಿಗೊಂಡಿರುವ ತುಟಿ, ಮೇಲ್ದವಡೆಯಲ್ಲಿ ಎರಡು ದೊಡ್ಡದಾದ ಮತ್ತು ಬಾಗಿದ ಕೋರೆ ಹಲ್ಲುಗಳು, ಕೆಳ ದವಡೆಯಲ್ಲಿ ಎರಡು ಚಿಕ್ಕ ಹಲ್ಲುಗಳು ಕಾಣಿಸುತ್ತದೆ. ಇನ್ನೂ ಈ ಸಿಂಹದಲ್ಲಿ ಗುಂಪು ಗುಂಪಾಗಿ ಇರುವ ಎರಡೆಳೆಯ ಕೇಸರ, ಭವ್ಯವಾದ ಮುಂಭಾಗ ಮತ್ತು ಅರೆ ನಿಮಿರಿದ ಶಿಶ್ನ ಚಿನ್ಹೆಗಳು ಇದ್ದು ಕದಂಬರ ಕಾಲದ ಸಿಂಹ ಎಂದು ಸಾಬೀತು ಪಡಿಸುತ್ತದೆ. ಇನ್ನೂ ಈ ಸಿಂಹವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದಕ್ಕೆ ಈ ಹಿಂದೆ ಕಿವಿ, ಕಣ್ಣು, ಉಬ್ಬು, ಮೀಸೆ ಇದ್ದದ್ದು ಗೋಚರಿಸುತ್ತದೆ ಆದರೆ 1600 ಸಂವತ್ಸರದ ಈ ಸಿಂಹ ಮಲೆನಾಡಿನ ಮಳೆಯಲ್ಲಿ ನೆಂದು ಕಾಲಕ್ರಮೇಣ ಇವುಗಳು ಸವಿದಿದೆ. ಇನ್ನೂ ಕದಂಬರ ಸಿಂಹದಲ್ಲಿ ಕಾಣಸಿಗುವ ಬಾಲದ ವಿಚಿತ್ರ ತಿರುಚು ಇಲ್ಲಿ ಕಾಣಬಹುದು. ಒಟ್ಟಾರೆ ಹೇಳುವುದಾದರೆ ಈ ಸಿಂಹವು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ನಾರಸಿಂಹನ ಅವತಾರದಲ್ಲಿ ಮಲೆನಾಡಿನ ಈ ಪರಿಸರವನ್ನು 1600ಕ್ಕೂ ಹೆಚ್ಚು ಸಂವತ್ಸರದ ಕಾಲ ಕಾಯುತ್ತಾ ಕುಳಿತಿದೆ.
ಸ್ಥಳೀಯ ಪುರಾಣ ಮತ್ತು ಕದಂಬರ ಸಿಂಹದ ಕಾಲಾವಧಿ:-
ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಪ್ರಕಾರ ಮಯೂರವರ್ಮನ ಅಳಿಯ ಲೋಕಾದಿತ್ಯ (ಕನಕವತಿಯ ಗಂಡ) ಶ್ರೀ ಭಟ್ಟಾಚಾರ್ಯ (ಗುರುಗಳು), ಬ್ರಾಹ್ಮಣರು ಮತ್ತು ಸೈನ್ಯದ ಜೊತೆಗೆ ತೀರ್ಥಹಳ್ಳಿಯ ಆಗುಂಬೆಯ ಹತ್ತಿರ ಹುಟ್ಟುವ ವಾರಾಹಿ ನದಿಯ ಪಾತ್ರದಲ್ಲಿ ಸಾಗುತ್ತಾ ಘಟ್ಟದ ಕೆಳಗೆ ಇರುವ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಾನೆ. ಒಮ್ಮೆ ಭಟ್ಟಾಚಾರ್ಯರ ಕನಸಿನಲ್ಲಿ ದಶಬಾವುವಿನ ಗಣಪತಿ ಕಾಣಿಸಿಕೊಂಡು ವಾರಾಹಿ ನದಿಯ ದಂಡೆಯ ಮೇಲೆ ಶ್ರೀ ಯೋಗ ನಾರಸಿಂಹ ಸ್ವಾಮಿಯನ್ನು ಪ್ರತಿಷ್ಠಾಪಿಸಬೇಕು ಎಂದು ಆಜ್ಞೆಯಿಸಿದ ಕಾರಣ ಲೋಕಾದಿತ್ಯ ಐದು ಶ್ರೀ ಯೋಗ ನಾರಸಿಂಹ ಸ್ವಾಮಿಯ ದೇವಾಲಯವನ್ನು ಕಟ್ಟಿಸಿ ಅದನ್ನು ಪೂಜಿಸಲು ಅಹಿ ಕ್ಷೇತ್ರದಿಂದ (Ahi Kshetra) ಬ್ರಾಹ್ಮಣರನ್ನು ಕರೆಸಿ ಅವರಿಗೆ 32 ಹಳ್ಳಿಗಳನ್ನು ದಾನ ನೀಡಿ ದೇವರ ಪೂಜೆಯನ್ನು ನಡೆಸಿಕೊಂಡು ಹೋಗಲು ಸೂಚಿಸುತ್ತಾನೆ. ಈ ಐದರಲ್ಲಿ ಒಂದು ನಮ್ಮ ತೀರ್ಥಹಳ್ಳಿಯ ಮೇಗರವಳ್ಳಿ ಹತ್ತಿರ ಇರುವುದು ವಿಶೇಷ ಏಕೆಂದರೆ ಇದರಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ ಕೊಡಲ ನಾರಸಿಂಹ ದೇವರು. ನನ್ನ ಅಭಿಪ್ರಾಯದಲ್ಲಿ ಬಹುಶಃ ಈ ಭವ್ಯ ಸಿಂಹ ರೂಪಿ ನಾರಸಿಂಹ ದೇವರನ್ನು ಲೋಕಾದಿತ್ಯ 365 ಇಂದ 400ರ (365 – 400 C.E) ಮಧ್ಯದಲ್ಲಿ ಪ್ರತಿಷ್ಠಾಪಿಸಿರ ಬಹುದು. ಇನ್ನೂ ಇತಿಹಾಸ ತಜ್ಞರಾಗಿರುವ ಡಾ ಎಸ್.ವಿ. ಪಾಡಿಗಾರ್, ಡಾ ಜಗದೀಶ್ ಅಗಸಬಾಗಿಲು ಮತ್ತು ಅ. ಸುಂದರ ಅವರ ಪ್ರಕಾರ ಇದು ಐದನೇ ಶತಮಾನದ ಪ್ರಥಮ ಹಂತದ (400 to 430 C.E) ಕದಂಬರ ಕಾಲದ ಸಿಂಹ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸಿದಾಗ ಈ ಸಿಂಹ ಐದನೇ ಶತಮಾನದ ಮೊದಲ ಎರಡು ದಶಕದಲ್ಲಿ ಸ್ಥಾಪಿಸಿದ್ದು ಇಂದಿಗೆ ಸರಿಸುಮಾರು 1600 ಸಂವತ್ಸರವನ್ನು ಪೂರೈಸಿ ನಮ್ಮ ಶಿವಮೊಗ್ಗ ಜಿಲ್ಲೆಯ ಮತ್ತು ಬಹುಶಃ ಕರ್ನಾಟಕದ ಅತಿ ಪುರಾತನ ಸಿಂಹ ಎಂಬ ಖ್ಯಾತಿಯನ್ನು ಪಡೆದಿದೆ.
ಶಾಸನದಲ್ಲಿ ಕೊಡಲ ನಾರಸಿಂಹ ದೇವರು:- ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಹೋದರರಲ್ಲಿ ಒಬ್ಬರಾದ ವೀರ ಬುಕ್ಕರಾಯರ ಮಗ ಎರಡನೇ ಹರಿಹರರಾಯರ (1342 – 1404) ಆಳ್ವಿಕೆಯ ಕಾಲದಲ್ಲಿ ಕೊಡಲ ನಾರಸಿಂಹ ದೇವರ ಪೂಜೆಯನ್ನು ನಡೆಸಿಕೊಂಡು ಹೋಗಲು ಅಪಾರ ಪ್ರಮಾಣದ ಭೂಮಿಯನ್ನು ದಾನ ನೀಡಿರುವ ಬಗ್ಗೆ ಇಲ್ಲೇ ಹತ್ತಿರದಲ್ಲಿ ದೊರೆತಿರುವ ಶಾಸನ ಹೇಳುತ್ತದೆ. ಶಕವರ್ಷ 1303ರ ರಕ್ತಾಕ್ಷಿ ಸಂವತ್ಸರದ ಶ್ರಾವಣ ಮಾಸದ ಬ 30 ರಂದು ( wednesday 17th August 1384AD) ಸಂಭವಿಸಿದ ಸೂರ್ಯಗ್ರಹಣದ ಪುಣ್ಯಕಾಲದಲ್ಲಿ ಎರಡನೇ ಹರಿಹರರಾಯರ ಮಹಾಪ್ರಧಾನ ಮಾಧವಮಂತ್ರಿ ಮಲೆನಾಡಿನ ಆರಗದ ಹದಿನೆಂಟುಕಂಪಣದ ಸಾತಳಿಗೆನಾಡನಲ್ಲಿ ಇರುವ ಕೊಡಲ ಅಗ್ರಹಾರದ ವಿಪ್ರರಿಗೆ ಭೂದಾನ ನೀಡಿರುವ ಬಗ್ಗೆ ಮಾಹಿತಿಯನ್ನು ಈ ಶಾಸನ ಹೇಳುತ್ತದೆ. ಇನ್ನೂ ಈ ಶಾಸನದ ಕೊನೆಯ 9 ಸಾಲು ಶಾಪಾಶಯದ ಭಾಗವಾಗಿದ್ದು ಇದರ ಪ್ರಕಾರ – ಬ್ರಾಹ್ಮಣರಿಗೆ ಕೊಟ್ಟ ಭೂಮಿ, ಈ ಸಾಮಾನ್ಯವಾದ ಈ ರಾಜರ ಧರ್ಮಸೇತುವನ್ನು ಮುಂದಿನ ರಾಜರುಗಳೇ ಕಾಲಕಾಲಕ್ಕೂ ನಿಮ್ಮಿಂದ ಪಾಲಿಸಲ್ಪಡಬೇಕು ಎಂದು ರಾಮ ಚಂದ್ರನಾದ ನಾನು ಬೇಡಿಕೊಳ್ಳುತ್ತೇನೆ. ದಾನಪಾಲನೆಯ ಜೊತೆಗೆ ದಾನ ಶ್ರೇಯಸ್ಸನ್ನೂ ಪಾಲನೆಮಾಡಬೇಕು. ದಾನದಿಂದ ಸ್ವರ್ಗಪ್ರಾಪ್ತಿಯಾದರೆ, ಅನುಪಾಲನೆಯಿಂದ ಅಚ್ಯುತಪದವು ಪ್ರಾಪ್ತವಾಗುತ್ತದೆ. ತಾನು ಕೊಟ್ಟಿದ್ದಕ್ಕಿಂತ ಬೇರೆಯವರು ಕೊಟ್ಟಿದ್ದನ್ನು ಕಾಪಾಡುವುದು ಎರಡು ಪಟ್ಟು ಪುಣ್ಯಕೊಡುತ್ತದೆ. ಹಿಂದೆ ಕೊಟ್ಟಿದ್ದರ ಅಪಹಾರದಿಂದ ತಾನು ಮಾಡಿದ ದಾನವೂ ನಿಷ್ಫಲವಾಗುತ್ತದೆ. ತಾನು ಕೊಟ್ಟಿದ್ದನ್ನು ಅಥವಾ ಬೇರೆಯವರು ಕೊಟ್ಟಭೂಮಿಯನ್ನು ಅಪಹರಿಸಿದರೆ ಅವನು ಸಾವಿರ ವರ್ಷಗಳಷ್ಟು ಕಾಲ ಮಲದಲ್ಲಿ ಕ್ರಿಮಿಯಾಗಿ ಹುಟ್ಟುತ್ತಾನೆ. ಈ ಧರ್ಮವನ್ನು ಮೀರುವವರು ವಾರಣಾಸಿಯಲ್ಲಿ ಪಂಚ ಕಾಶೀ ಕ್ಷೇತ್ರದಲ್ಲಿ ಹನ್ನೆರಡು ಸಾವಿರ ಹಸುವನ್ನು, ಬ್ರಾಹ್ಮಣರನ್ನು ಕೊಂದ ಪಾಪಕ್ಕೆ ಒಳಗಾಗುತ್ತಾರೆ.
ಆದರೆ ಇಂದು ಈ ಪುರಾತನ ಸಿಂಹ ರೂಪಿ ನಾರಸಿಂಹ ದೇವರು ದೇವಾಲಯ ಇಲ್ಲದೆ ಕಾಡಿನಲ್ಲಿ ಮೌನವಾಗಿ ಕೂತ್ತಿದ್ದು, ಇಲ್ಲಿಯ ಸ್ಥಳೀಯರು ಕೆಲವು ಆಯ್ದ ದಿನದಂದು ಇದನ್ನು ಪೂಜಿಸಿ ಕೊಂಡು ಬರುತ್ತಿದ್ದಾರೆ. ಇನ್ನೂ ಕಾಲ ಕ್ರಮೇಣ ಈ ಕೊಡಲ ನಾರಸಿಂಹ ದೇವರ ಪ್ರದೇಶದಲ್ಲಿ ವೀರಶೈವ ಮಠ ಸ್ಥಾಪನೆ ಆಗುತ್ತದೆ ನೋಡ ನೋಡುತ್ತಲೇ ಸಿಂಹ ಭೂಮಿಯ ಒಳಗೆ ಸೇರಿಕೊಂಡರೆ ಇನ್ನೊಂದು ಕಡೆ ಬಸವಣ್ಣ ದೇವಾಲಯದ ಬಸವಣ್ಣ ಪವಾಡ ಮಾಡುತ್ತ ಹೆಸರುವಾಸಿ ಆಗುತ್ತದೆ. ಆದರೆ ಅದೊಂದು ದಿನ ಆಗಬಾರದು ನಡೆದು ಹೋಗುತ್ತದೆ, ಇದರ ಪರಿಣಾಮವಾಗಿ ಶೃಂಗೇರಿಯ ಜಗದ್ಗುರಗಳ ಶಾಪಕ್ಕೆ ಈ ಪ್ರದೇಶ ತುತ್ತಾಗುತ್ತದೆ.
(ಲೇಖನದ ಎರಡನೇ ಭಾಗ ನಿರೀಕ್ಷಿಸಿ)
-ಲೇಖನ ಮತ್ತು ಚಿತ್ರಗಳು:
ಅಜಯ್ ಕುಮಾರ್ ಶರ್ಮ
ಇತಿಹಾಸ ಅಧ್ಯಯನಕಾರರು ಹಾಗೂ ಪರಿಸರ ಹೋರಾಟಗಾರರು
ಶಿವಮೊಗ್ಗ








