ಸ್ಥಳೀಯ ಕ್ರಿಕೆಟ್ ಟೂರ್ನಿಗೂ ಪಾಕಿಸ್ತಾನದಲ್ಲಿ ಉಗ್ರರ ಉಪದ್ರ…!
ಪಾಕಿಸ್ತಾನ ಸುರಕ್ಷಿತ ರಾಷ್ಟ್ರವಲ್ಲ ಎಂಬುದು ಮತ್ತೊಮ್ಮೆ ವಿಶ್ವಕ್ಕೆ ಸಾಬೀತಾಗಿದೆ. ಪಾಕ್ ನೆಲದಲ್ಲಿ ಬಾಂಬ್, ಬುಲೆಟ್ ಸಿಡಿಯುವುದು ಮಾಮೂಲಿಯಾಗಿಬಿಟ್ಟಿದೆ. ಉಗ್ರರ ಭೀತಿ ಬೇರೆ ದೇಶಗಳಿಗೆ ಮಾತ್ರವಲ್ಲ. ತನ್ನ ದೇಶದದ ಜನರು ಕೂಡ ಆತಂಕದಲ್ಲೇ ಬದುಕು ಸಾಗಿಸಬೇಕಾದಂತಹ ಪರಿಸ್ಥಿತಿ ಇದೆ.
ಇನ್ನು ಪಾಕಿಸ್ತಾನದಲ್ಲಿ ಸುಮಾರು ಒಂದು ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿಲ್ಲ. 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಗುಂಡಿನ ದಾಳಿ ನಡೆದ ನಂತರ ಪಾಕಿಸ್ತಾನಕ್ಕೆ ಯಾವುದೇ ಪ್ರಮುಖ ತಂಡಗಳು ಪ್ರವಾಸ ಮಾಡಿಲ್ಲ. ಕ್ರಿಕೆಟ್ ಆಟಗಾರರಿಗೆ ಪಾಕ್ ಸುರಕ್ಷಿತ ತಾಣವಲ್ಲ ಎಂದು ಯಾವುದೇ ಕ್ರಿಕೆಟ್ ಮಂಡಳಿಗಳು ತಮ್ಮ ತಂಡಗಳನ್ನು ಪಾಕ್ ಪ್ರವಾಸ ಮಾಡಲು ಒಪ್ಪಿಕೊಳ್ಳುತ್ತಿಲ್ಲ. ಹೇಗೋ ಸ್ವಲ್ಪ ಧೈರ್ಯ ಮಾಡಿರುವ ವೆಸ್ಟ್ ಇಂಡೀಸ್, ಜಿಂಬಾಬ್ವೆ ತಂಡಗಳು ಕೆಲವೊಂದು ಸರಣಿಗಳನ್ನು ಆಡಿವೆ. ಇನ್ನುಳಿದಂತೆ ಪಾಕ್ ತಟಸ್ಥ ತಾಣದಲ್ಲಿ ಸರಣಿಗಳನ್ನು ಆಯೋಜನೆ ಮಾಡುತ್ತಿದೆ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಬೊಕ್ಕಸವೂ ಖಾಲಿಯಾಗಿದೆ.
ಈ ನಡುವೆ ಪಾಕ್ ಕ್ರಿಕೆಟ್ ತಂಡ ಈಗ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಅದು ಕೂಡ ಒಪ್ಪಂದ ಮಾಡಿಕೊಂಡು ಈ ಸರಣಿಯನ್ನು ಆಡಲಾಗುತ್ತಿದೆ. ಇಂಗ್ಲೆಂಡ್‍ನಲ್ಲಿ ಪಾಕ್ ತಂಡ ಆಡಬೇಕಾದ್ರೆ ಇಂಗ್ಲೆಂಡ್ ಪಾಕ್ ಪ್ರವಾಸ ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾತುಕತೆ ನಡೆದಿದ್ದವು. ಈ ಬಗ್ಗೆ ಪಿಸಿಬಿ ತನ್ನ ದೇಶದ ಮೇಲಿರುವ ಕಳಂಕವನ್ನು ತಪ್ಪಿಸುವ ಪ್ರಯತ್ನದಲ್ಲಿತ್ತು.
ಆದ್ರೆ ಈಗ ಪಾಕ್ ಕ್ರಿಕೆಟ್ ಗೆ ಮತ್ತೊಂದು ಆಘಾತ ಉಂಟಾಗಿದೆ. ಅಂತಾರಾಷ್ಟ್ರೀಯ, ದೇಶಿ ಕ್ರಿಕೆಟ್ ಬಿಡಿ, ಸ್ಥಳೀಯ ಕ್ರಿಕೆಟ್ ಟೂರ್ನಿಗೂ ರಕ್ಷಣೆ ಇಲ್ಲದಂತಾಗಿದೆ. ಲೋಕಲ್ ಟೂರ್ನಿಗಳಿಗೂ ಉಗ್ರರ ಕರಿನೆರಳು ಬಿದ್ದಿದೆ. ಹೌದು, ಪಾಕಿಸ್ತಾನದ ಕೈಬರ್ ಪಖ್ತು ನ್‍ಖ್ವಾ ಪ್ರಾಂತ್ಯದ ಕೋಹಟ್ ಡಿವಿಷನ್ ನಲ್ಲಿ ಕ್ರಿಕೆಟ್ ಟೂರ್ನಿ ನಡೆಯುತ್ತಿರುವ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಆದ್ರೆ ಈ ಗುಂಡಿನ ದಾಳಿಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಕೋವಿಡ್ ಸೋಂಕಿನ ನಡುವೆಯೂ ಪಾಕ್‍ನ ಓರ್ಕಝೆ ಜಿಲ್ಲೆಯ ಇಸ್ಮಾಯಲ್‍ಝೈ ತಾಲೂಕಿನ ದ್ರಾದರ್ ಮಮಝೈ ನಲ್ಲಿ ಅಮ್ನ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ಪಂದ್ಯ ವೀಕ್ಷಣೆ ಮಾಡಲು ರಾಜಕೀಯ ನಾಯಕರು, ಪತ್ರಕರ್ತರು ಸೇರಿದಂತೆ ಸಾಕಷ್ಟು ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಸೇರಿದ್ದರು. ಆದ್ರೆ ಮೈದಾನದ ಸಮೀಪದ ಬೆಟ್ಟದಿಂದ ಉಗ್ರರು ಏಕಾಏಕಿಯಾಗಿ ಗುಂಡಿನ ದಾಳಿ ನಡೆಸಿದ್ದರು. ಜನರು ಭಯದಿಂದ ಓಡಿ ಹೋಗಿದ್ದಾರೆ. ಆದ್ರೆ ಯಾವುದೇ ಜೀವಕ್ಕೆ ಹಾನಿಯಾಗಿಲ್ಲ ಎಂದು ಪಾಕ್‍ನ ಡೇಲಿ ಸ್ಟಾರ್ ವರದಿ ಮಾಡಿದೆ.
ಒಟ್ಟಿನಲ್ಲಿ ಪಾಕಿಸ್ತಾನ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡಿದೆ. ಉಗ್ರರನ್ನು ಪೋಷಣೆ ಮಾಡಿದ್ದ ಪಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದೇ ಪದೇ ತಲೆತಗ್ಗಿಸುತ್ತಿದೆ.
ಈ ಎಲ್ಲಾ ಘಟನೆಗಳನ್ನು ನೋಡಿದಾಗ ಯಾವ ರಾಷ್ಟ್ರಗಳು ಪಾಕ್ ನೆಲದಲ್ಲಿ ಧೈರ್ಯವಾಗಿ ಕ್ರಿಕೆಟ್ ಆಡಲು ಬರುತ್ತವೆ. ಪಾಕ್ ಕ್ರಿಕೆಟ್ ಪಾಕಿಸ್ತಾನದ ರಾಜಕೀಯದಿಂದ ನಶಿಸಿಹೋಗುತ್ತಿದೆ. ಅದೆಷ್ಟೋ ಪ್ರತಿಭಾವನ್ವಿತ ಆಟಗಾರರ ಪ್ರತಿಭೆಗಳು ಕಮರಿ ಹೋಗುತ್ತವೆ. ಈ ಪಾಕಿಸ್ತಾನಕ್ಕೆ ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ.








