ಹಾಸನ : ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಇಂದು ಬೆಳಗ್ಗೆ ಸಚಿವ ಕೆ.ಗೋಪಾಲಯ್ಯ ಅವರು ಭೇಟಿ ನೀಡಿದ್ದರು. ಬಳಿಕ ಜಲಾಶಯದ ಇಂಜಿನಿಯರ್ ಗಳೊಂದಿಗೆ ಮಾತನಾಡಿ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ನೀರನ್ನು ಹರಿಬಿಡಲು ತಿಳಿಸಿದರು. ಹಾಗೇ ಹೇಮಾವತಿ ಜಲಾಶಯಕ್ಕೆ ಒಳಪಡುವ ಜಿಲ್ಲೆಗಳಾದ ತುಮಕೂರು ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ಕೆರೆಕಟ್ಟೆಗಳ ನೀರು ತುಂಬಿಸಲು ನಾಲೆಗಳಿಗೆ ನೀರನ್ನು ಬಿಡುವಂತೆ ಸೂಚನೆ ನೀಡಿದರು.
ಇನ್ನು ಈಗಾಗಲೇ ಹೇಮಾವತಿ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವಿದ್ದು 20 ಸಾವಿರ ಕ್ಯೂಸೆಕ್ಸ್ ನೀರು ನಾಲೆ ಹಾಗೂ ನದಿಗೆ ಹರಿಬಿಡಲಾಗುತ್ತಿದೆ. ಮತ್ತೊಂದೆಡೆ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಬೇಲೂರು, ಹಳೇ ಬೀಡು, ಆಲೂರು ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಹಳ್ಳ, ಕೊಳ್ಳಗಳು, ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶದಲ್ಲಿರುವ ಸಾರ್ವಜನಿಕರ ಎಚ್ಚರಿಕೆವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.








