ನೆನಪೆಂಬ ಕನಸನ್ನು ಕೊಂಚವು ಮರೆಯಲಾಗದು…..
ನೆನಪಾದಾಗ ಕಣ್ಣಂಚು ಮತ್ತೆ ತೇವವಾಗುವುದು….
ಪರಿಚಿತರ ಮನೆ ಹೊರಗೆ ಕುಳಿತು, ಅಪರಿಚಿತರ ಹಾಗೆ ಟಿ.ವಿ ಗೆ ತಲೆ ಇಣುಕಿ ದಾಗ ಮನೆ ಒಡತಿ ಸರಕ್ಕನೆ ಬಂದು ನನ್ನ ಇರುವಿಕೆಯ ಕಂಡು ಕಾಣದಂತೆ ಟಿ.ವಿ ಬಂದು ಮಾಡಿ ನಕ್ಕು ಒಳನಡೆದಾಗ ಮುಖಕ್ಕೆ ಹೊಡೆದಂತಾಗಿ ಅತ್ತು ಮನೆಗೆ ನಡೆದ ಅನುಭವ ಬಹುಶಃ ಎಷ್ಟೋ ಜನರಿಗಾಗಿದ್ದರೂ ಮನಸ್ಸಲ್ಲೆ ನೋವ ನುಂಗಿ! ಮರೆತಿರಲೂ ಬಹುದು……..

ಆಗಿನ ಕಾಲದ ಟಿ.ವಿಯಲ್ಲಿ ಕಪ್ಪುಬಿಳುಪಿನ ದೃಶ್ಯಗಳೆ ನಮಗೆ ಅದ್ಭುತ ಆನಂದ ಕೊಡುತ್ತಿದ್ದವು.ಚಿಕ್ಕ ಟಿ.ವಿಯಲ್ಲಿ ಡಿ.ಡಿ ಚಂದನ ಬಿಟ್ಟರೆ ಬೇರೆ ಚಾನೆಲ್ ಗಳು ಇತ್ತು ಎನ್ನುವುದೇ ನೆನಪಿಲ್ಲ!.
ಬೇಗ ಬೇಗ ಮನೆಗೆಲಸ ಮುಗಿಸಿ ಪಕ್ಕದ ಮನೆ ಎದುರು ಕುಳಿತು ಟಿ.ವಿ ಸದ್ದಿಗೆ ಕಿವಿಕೊಟ್ಟ ಅನುಭವ ಮುಖದಲ್ಲಿಗ ಕಿರುನಗೆ ಮೂಡಿಸುವುದು. ಉದ್ದಕೋಲಿನಂತ ಆ್ಯಂಟನವನ್ನು ಸುತ್ತ ತಿರುಗಿಸಿ ಕನ್ನಡ ಹಿಂದಿ ಧಾರವಾಹಿಗಳನ್ನು ನೋಡುವುದೆ ಖುಷಿ. ರಾತ್ರಿ 7.30ಕ್ಕೆ ಬರುವ ಚಿತ್ರಮಂಜರಿ, ಭಾನುವಾರದ ಚಲನಚಿತ್ರಗಳ ಭಾವಲಹರಿ, ಶಕ್ತಿಮಾನ್, ಶಕಲಕ ಭೂಂ ಭೂಂ, ಮಾಯಜಿಂಕೆ, ರಾಮಾಯಣ ಮಹಾಭಾರತ ಧಾರವಾಹಿಗಳಿಗೆ ಕಾದು ಕುಳಿತು ನೀಡಿದ ಗಮನ,ಬಹುಶಃ ಓದಿಗೂ ನೀಡಿರಲಿಕ್ಕಿಲ್ಲ……

ಕಾಲ ಬದಲಾದಂತೆ!ಹೆಚ್ಚು ಶ್ರಮವಹಿಸಿ, ಬಿಡಿಗಾಸು ಸೇರಿಸುತ್ತಾ , ಮನೆಗೊಂದು ಹೊಸ ಟಿ.ವಿ ತಂದಾಗ ಮನತುಂಬಿದ ಖುಷಿ ಹೇಳತೀರದು. ಬಣ್ಣದ ಚಿತ್ತಾರದ ದೃಶ್ಯಗಳು, ಹೊಸ ಹೊಸ ಧಾರವಾಹಿ,ಸಿನಿಮಾ, ಕ್ರೀಡೆ,ಸಮುದಾಯದ ಸಮಾಚಾರಗಳ ಸುದ್ದಿವಾಹಿನಿಗಳು, ಆಗಿನ ಕಾಲಕೆ ಇಷ್ಟವಾಗ ತೊಡಗಿತ್ತು…
ಮನಸ್ಸು ಎಷ್ಟೇ ಅಸಮಾಧಾನದಿಂದ ಒದ್ದಾಡುತ್ತಿದ್ದರೂ, ಮನೆಯೊಳಗಿನ ಟಿ.ವಿಯ ಸುಂದರ ದೃಶ್ಯಗಳು ಮನಸ್ಸಿಗೆ ಮುದ ನೀಡಿ ತಂಪೆರೆಯುತ್ತಿದ್ದವು.
ಇಂಪಾದ ಸ್ವರ ಮೇಳಗಳಿಂದಾದ ಸುಂದರ ಹಾಡುಗಳು ಮನಸ್ಸಿಗೆ ನೆಮ್ಮದಿ ಹಂಚುತ್ತಿದ್ದವು. ಅಮ್ಮ ಬೈದಾಗ ಅಳು ಮರೆಯಲು ಜೊತೆಯಾದ ಆತ್ಮೀಯ ಗೆಳೆಯ ಎಂದರೆ ಅದು ಟಿ.ವಿ ಮಾತ್ರ.
ಕೆಲವೊಮ್ಮೆ ಕೋಪ ಬಂದಾಗ ಸಿಟ್ಟಿನಲ್ಲಿ ರಿಮೋಟನ್ನ ನೆಲಕ್ಕೆ ಕುಕ್ಕಿದರೂ ಮತ್ತೊಮ್ಮೆ ಪ್ರೀತಿಯ ನಗೆ ಮೂಡಿಸುವ ಸ್ನೇಹಜೀವಿ ನನ್ನ ಟಿ.ವಿ. ದಿನಕ್ಕೊಮ್ಮೆ ಧೂಳನ್ನು ಒರೆಸಿ ಬಟ್ಟೆ ಹಾಸಿ ಮಲಗಿಸುವಾಗ ಮತ್ತೊಮ್ಮೆ ಧನ್ಯತಾಭಾವ.
ಮನೆಯವರೆಲ್ಲ ಒಟ್ಟಾಗಿ ಕುಳಿತು ಟಿ.ವಿ ಎದುರು ಊಟಮಾಡುತ್ತ, ಹರಟೆ ಹೊಡೆದು ನಕ್ಕು ಬೀಗಿದ ದಿನಗಳ ನೆನಪು, ಮರೆಯುವುದು ಅಷ್ಟು ಸುಲಭವಲ್ಲ.
ಅತ್ತಾಗ ತಾಯಿ ಮಡಿಲಲಿ ಮಲಗಿಸಿದಂತೆ!ಸೋತಾಗ ಸಮಾಧಾನಿಸಿದ ಅಪ್ಪನಂತೆ! ಹತಾಶೆಯಲಿ ಕುಂತಾಗ ಆಸೆತುಂಬಿಸುವ ಸಹೋದರನಂತೆ!ನಗಿಸುವ ಸೋದರಿಯಂತೆ! ಭಾವನೆಗಳಿಗೆ ಸ್ಪಂದಿಸುವ ಗೆಳತಿಯಂತೆ!
ಮನಕೆ ರಂಜಿಸಿದ ಟಿ.ವಿಯ ಜೊತೆ ಹದಿನೈದು ವರುಷಗಳ ಸಂಬಂಧ…..

ಕಾಲ ಬದಲಾಗಿದೆ. ಹತ್ತು ಹದಿನೈದು ವರುಷಗಳ ಹಿಂದಿನ ಟಿ.ವಿಗಳು ಮೂಲೆ ಸೇರಿದೆ.ಭಾವನೆಗಳು ಬದಲಾಗಿವೆ! ಸಂಬಂಧಗಳು ಹಾಳಾಗಿವೆ.ಒಟ್ಟಿಗೆ ಕುಳಿತು ಊಟಮಾಡುವ ಖುಷಿ ಮಾಯವಾಗಿದೆ.
ಆದರೆ ಈಗ ಸಾವಿರಾರು ರೂಪಾಯಿ ಖರ್ಚು ಮಾಡಿ ತರುವ ಟಿ.ವಿಗಳು ಗೋಡೆಗೆ ಮಾತ್ರ ಸೀಮಿತವಾಗಿದೆ. ಅದರ ಬಳಿ ಹೋಗಿ ನೋಡಲು ಸಮಯ ಇಲ್ಲ. ಕೂತು ನಾಲ್ಕು ಪದ ಕೇಳುವ ವ್ಯವಧಾನವೂ ನಮಗಿಲ್ಲ. ಧೂಳಿದೇಯೋ ಅದು ಕೂಡಾ ತಿಳಿದಿಲ್ಲ.
ಆಗಿನ ಕಾಲದಲ್ಲಿ ಮಾಧ್ಯಮಗಳಲ್ಲಿ ಬಿತ್ತಾರವಾಗುತ್ತಿದ್ದ ಅದೆಷ್ಟೋ ಒಳ್ಳೆಯ ಸಂದೇಶಗಳು ಯುವಜನತೆಗೆ ಸಾಧನೆಗೆ ಸ್ಪೂರ್ತಿ ಯಾಗಿ, ಸತ್ಪ್ರಜೆಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು….
ಆದರೀಗ ಟಿ.ವಿಗಿದ್ದ ಗೌರವವೂ ಮರೆಯಾಗಿದೆ.ಟಿ.ವಿ
ಮೊಬೈಲ್, ಲ್ಯಾಪ್‌ಟಾಪ್ ಗಳ ಬದಲಾವಣೆಯ ಸ್ವರೂಪಗಳಿಂದ ಹಳೆ ಟಿ.ವಿ, ರೇಡಿಯೋಗಳು ಗುಜರಿ ಅಂಗಡಿಯಲ್ಲಿ ಅತ್ತು ಮಲಗಿವೆ.
ಏನೇ ಹೇಳಿ ನನ್ನ ಹಳೆ ಟಿವಿ ಜೊತೆಗಿದ್ದ ಅವಿನಾಭಾವ ಸಂಬಂಧ ಈ ಹೊಸ ಟಿ.ವಿಯ ಜೊತೆಗಿಲ್ಲ. ಹೊಸ ಟಿ.ವಿ ಬಂದು ಕಿಲಕಿಲನೆ ನಕ್ಕಾಗ, ಅದರೊಳಗಿನ ಕರ್ಕಶಧ್ವನಿಗಳ ಹಾಡು, ಅಸಂಬದ್ಧ ನಡವಳಿಕೆಯ ದೃಶ್ಯಗಳು, ಮಾಧ್ಯಮಗಳ ಕಿರಿಕಿರಿಗಳು
ತಲೆನೋವನ್ನು ಮತ್ತಷ್ಟೂ ಹೆಚ್ಚು ಮಾಡಿ ತಾಳ್ಮೆಸಡಿಲಿಸುತ್ತಿದೆ. ಒಮ್ಮೊಮ್ಮೆ ಹಳೆ ಟಿ.ವಿಯ ಪಕ್ಕದಲಿ ನಿಂತು ತಬ್ಬಿಕೊಂಡು ಅತ್ತಾಗ ಮೌನಮುರಿದ ದನಿಯಿಂದ ವ್ಯಂಗ್ಯವಾದ ಮಾತು ಕೇಳುತ್ತದೆ…
“ಮರುಳಾಗದಿರು
ಹೊಸತರಲಿ ತೋರುವ
ಸ್ನೇಹಕಾಳಜಿಗೆ!
ವಯಸ್ಸಾಗಿ ಮುರಿದು ಬಿದ್ದಾಗ ಮಾರುವರು ಗುಜರಿ ಅಂಗಡಿಗೆ”……
* ಶರಣ್ಯ ಬೆಳುವಾಯಿ








