ಮಂಡ್ಯ: ಕಾವೇರಿ ಕೊಳ್ಳ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಕಳೆದ 3 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ನದಿ ದಂಡೆಯ ಹಲವು ಪ್ರವಾಸಿತಾಣಗಳು ಜಲಾವೃತಗೊಂಡಿವೆ. ಬಲಮುರಿ, ಸಂಗಮ್,ಘೋಸಯ್ ಘಾಟ್, ರಂಗನತಿಟ್ಟು ಸ್ನಾನಘಟ್ಟ ಮುಳುಗಡೆಯಾಗಿದೆ. ನದಿದಂಡೆಯ ಪ್ರಸಿದ್ದ ನಿಮಿಷಾಂಭ ದೇಗುಲದಲ್ಲಿ ಭಕ್ತರ ಸ್ನಾನಗೃಹ, ನದಿ ಪಕ್ಕದಲಿದ್ದ ವ್ಯಾಪಾರಸ್ಥರ ಕೆಲ ಅಂಗಡಿಗಳು ನೀರಿನಿಂದ ಮುಚ್ಚಿಹೋಗಿವೆ. ಅಲ್ಲದೇ ಪ್ರಹಾಹ ಹೆಚ್ಚಾದ್ರೆ ಪ್ರಾಚೀನ ವೆಲ್ಲೆಸ್ಲಿ ಸೇತುವೆಗೂ ಮುಳುಗಡೆ ಕಂಟಕ ಎದುರಾಗಿದೆ.
ಭಾರೀ ಮಳೆಯಿಂದಾಗಿ ಕೆ.ಆರ್.ಎಸ್.ಅಣೆಕಟ್ಟೆಯ ನೀರಿನ ಮಟ್ಟ 118 ಅಡಿ ತಲುಪಿದೆ. ಒಳಹರಿವಿನ ಪ್ರಮಾಣ 77 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದ್ದು, 75 ಸಾವಿರ ನೀರು ಬಿಡುಗಡೆ ಮಾಡಲಾಗಿದೆ. ಇನ್ನೂ ಮಧ್ಯಾಹ್ನದ ವೇಳೆಗೆ ಒಳ ಹಾಗೂ ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಕಾವೇರಿ ನದಿಯ ತಳ ಪ್ರದೇಶಗಳಲ್ಲಿನ ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ನೆರೆ ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದೆ.








