ಕೊಳ್ಳೇಗಾಲ : ಕೆಆರ್ ಎಸ್ ಹಾಗೂ ಕಬಿನಿ ಅಣೆಕಟ್ಟಿನಿಂದ ಕಳೆದ ಎರಡು ದಿನಗಳಿಂದ ನೀರು ಹೊರ ಹರಿಸಲಾಗುತ್ತಿದ್ದು, ಕಾವೇರಿ ಮೈದುಂಬಿ ಹರಿಯುತ್ತಿದ್ದಾರೆ. ಇದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.
ಹೀಗೆ ಪ್ರವಾಹ ಭೀತಿ ಇರುವ ದಾಸನಪುರ, ಮುಳ್ಳೂರು, ಹಳೇ ಅಂಪಾಪುರ,ಹರಳೆ, ಯಡಕೊರಿಯ ಗ್ರಾಮಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸಚಿವರಿಗೆ ನಿವಾಸಿಗಳು, ವರ್ಷ ವರ್ಷವೂ ನೆರೆ ಬಂದು ಮನೆ, ಬೆಳೆ, ಆಸ್ತಿ-ಪಾಸ್ತಿ ಹಾಳುಗೆಡವುತ್ತಿದೆ. ಇನ್ನು ಮುಂದಾದರೂ ನೆರೆ ತಡೆಯ ಬಗ್ಗೆ ಶಾಶ್ವತ ಕ್ರಮಕ್ಕೆ ನದಿ ತಟದಲ್ಲಿ ತಡೆಗೋಡೆ ನಿರ್ಮಾಣ ಮಾಡಿಕೊಡಿ ಎಂದು ಒತ್ತಾಯಿಸಿದರು.
ಬಳಿಕ ಸುರೇಶ್ ಸಚಿವ ಕುಮಾರ್ ಮಾತನಾಡಿ, ಕಬಿನಿ ಮತ್ತು ಕೆಆರ್‌ಎಸ್‌ನಿಂದ ಕಳೆದ ವರ್ಷ ಏಕಾಏಕಿ 2 ಲಕ್ಷ ಕ್ಯುಸೆಕ್ ನೀರನ್ನು ಬಿಟ್ಟಿದ್ದರಿಂದ ಪ್ರವಾಹ ಎದುರಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆಸ್ತಿ-ಪಾಸ್ತಿ, ಬೆಳೆ ನಾಶವೂ ಹೆಚ್ಚಾಗಿ ತೊಂದರೆ ಎದುರಿಸುವ ಪರಿಸ್ಥಿತಿ ಉಂಟಾಯಿತು. ಆದರೆ ಈ ಬಾರಿಯು ಮಲೆನಾಡಿನ ಕಡೆ ಮಳೆಯ ಪ್ರಮಾಣ ಅಧಿಕ ಮಳೆ ಬೀಳುತ್ತಿದ್ದು ನಾನು ಕಾವೇರಿ ಮತ್ತು ಕಬಿನಿ ಮಂಡಳಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಒಂದೇ ಬಾರಿ ಲಕ್ಷಕ್ಕೂ ಮೀರಿದ ಕ್ಯುಸೆಕ್ ನೀರು ಬಿಡಬಾರದು. ಜಲಾಶಯಗಳ ಒಳ ಮತ್ತು ಹೊರ ನೀರನ್ನು ಗಮನಿಸಿ ಹಂತ ಹಂತವಾಗಿ ನೀರನ್ನು ಬಿಡಬೇಕೆಂದು ಮಾರ್ಗದರ್ಶನ ನೀಡಿದ್ದೇನೆ. ಗಂಟೆ ಗಂಟೆಗೂ ಬೀಡುವ ನೀರಿನ ಪ್ರಮಾಣವನ್ನು ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದೇನೆ ಎಂದರು.








