ಮಡಿಕೇರಿ : ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ರಾಜಕೀಯ ಭೇದ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ಶಾಶ್ವತ ಪರಿಹಾರ ಕ್ರಮಗಳ ಯೋಜನೆಯನ್ನು ಸರ್ಕಾರದ ಮೂಲಕ ಜಾರಿಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೊಡಗು ದೇಶಕ್ಕೆ ಅಪ್ರತಿಮ ಸೈನಿಕರನ್ನು ನೀಡಿದ, ಜೀವನದಿ ಕಾವೇರಿಯ ತವರು, ಕರ್ನಾಟಕ ರಾಜ್ಯಕ್ಕೆ ವಿಲೀನಗೊಂಡ ಅಂದಿನ ಸಂದರ್ಭದಲ್ಲಿಯೇ 10 ಲಕ್ಷ ರೂ. ತೆರಿಗೆ ನೀಡಿದ ಕೊಡಗಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ ಎಂದು ಹೇಳಿದರು.
ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಭರವಸೆ ನೀಡಿದ್ದ ಪರಿಹಾರ ಇನ್ನೂ ನೀಡಿಲ್ಲ. ಶಾಸಕರು, ಸಂಸದರಿಗೆ ಈ ಬಗ್ಗೆ ಪ್ರಶ್ನಿಸಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಯಿದೆ ಎಂದ ಟ್ರಬಲ್ ಶೂಟರ್, ರಾಜ್ಯದಲ್ಲಿ ಕೊರೊನಾ ಮತ್ತು ಮಳೆ ಹಾನಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.








