ಈರುಳ್ಳಿ ಸೇವನೆಯಿಂದ ವೈರಸ್ ಆಘಾತ! ಇದೇನಿದು ಹೊಸ ಬಗೆಯ ಆನಿಯನ್ ವೈರಸ್ ಸೋಂಕು?
ಕೊರೋನವೈರಸ್ ಬಳಿಕ, ಇದೀಗ ವಿವಿಧ ದೇಶಗಳಿಂದ ಇನ್ನೊಂದು ಚೀನೀ ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ವರದಿಯಾಗಿದೆ. ಅಷ್ಟೇ ಅಲ್ಲ ಈರುಳ್ಳಿಯಿಂದ ಆ ಅಪಾಯಕಾರಿ ಸೋಂಕು ಅಮೆರಿಕ ಮತ್ತು ಕೆನಡಾದಲ್ಲಿ ಹರಡುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ತಜ್ಞರ ಪ್ರಕಾರ, ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತಿದ್ದು, ಇದರಿಂದಾಗಿ ಅಮೆರಿಕದ 34 ರಾಜ್ಯಗಳು ಮತ್ತು ಕೆನಡಾದ ಕೆಲವು ಭಾಗಗಳಲ್ಲಿ ಸಹ ಈ ಹೊಸ ಸೋಂಕು ವ್ಯಾಪಿಸುತ್ತಿದೆ. ಯುಎಸ್ ನಲ್ಲಿ ಇದು 400 ಜನರಿಗೆ ಹರಡಿದ್ದರೆ, ಕೆನಡಾದಲ್ಲಿ ಇದು 50 ಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿದೆ.
ಅಮೆರಿಕದ ಅತಿದೊಡ್ಡ ಆರೋಗ್ಯ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಅದು ತನ್ನ ಮಾರ್ಗಸೂಚಿಗಳಲ್ಲಿ ಥಾಮ್ಸನ್ ಇಂಟರ್ನ್ಯಾಷನಲ್ ಕಂಪನಿ ಮಾರಾಟ ಮಾಡಿದ ಈರುಳ್ಳಿಗಳನ್ನು ತಿನ್ನದಂತೆ ಎಚ್ಚರಿಸಿದೆ. ಅಷ್ಟೇ ಅಲ್ಲ, ಈಗಾಗಲೇ ಈ ಕಂಪನಿಯ ಈರುಳ್ಳಿ ತಮ್ಮ ಮನೆಗಳಲ್ಲಿ ಇದ್ದರೆ, ಅದನ್ನು ಎಸೆಯುವಂತೆಯೂ ಸೂಚಿಸಲಾಗಿದೆ. ಅದನ್ನು ತಿಂದವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ತಜ್ಞರ ಪ್ರಕಾರ, ಅಮೆರಿಕಾದಲ್ಲಿ ಮಾರಾಟವಾಗುವ ಕೆಂಪು ಮತ್ತು ಹಳದಿ ಈರುಳ್ಳಿಯೊಂದಿಗೆ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಈ ಸೋಂಕನ್ನು ಹರಡಿಸುತ್ತಿದೆ.
ಅಮೇರಿಕನ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಪ್ರಕಾರ, ಸಾಲ್ಮೊನೆಲ್ಲಾ ಸೋಂಕು ಅಮೆರಿಕದ 34 ರಾಜ್ಯಗಳಲ್ಲಿ ಕೆಂಪು ಈರುಳ್ಳಿಯಿಂದ ಹರಡಿದೆ. ಈ ಪ್ರಕರಣಗಳು ಮೊದಲು ಜೂನ್ 19 ಮತ್ತು ಜುಲೈ 11ರ ನಡುವೆ ವರದಿಯಾಗಿದ್ದು, ನಂತರ ಕ್ರಮೇಣ ಹೆಚ್ಚಳ ಕಂಡಿದೆ. ಅದರ ಗಂಭೀರತೆಯನ್ನು ಅರಿತ ಸಿಡಿಸಿ ಈರುಳ್ಳಿ ಸರಬರಾಜುದಾರ ಥಾಮ್ಸನ್ ಇಂಟರ್ನ್ಯಾಷನಲ್ ಕಂಪನಿಯ ವಿರುದ್ಧ ಮಾರ್ಗಸೂಚಿಗಳನ್ನು ಹೊರಡಿಸಿದೆ.ಆದರೆ, ತನ್ನ ಉತ್ಪನ್ನದಿಂದ ಯಾವುದೇ ರೀತಿಯ ಸೋಂಕು ಹರಡುತ್ತಿಲ್ಲ ಎಂದು ಕಂಪೆನಿ ತಿಳಿಸಿದೆ.
ಭಾರತಕ್ಕೆ ಬಂದಿತಾ ಚೀನಿಯರ ರಹಸ್ಯ ಬೀಜ?
ಈ ನಡುವೆ ಭಾರತಕ್ಕೆ ಚೀನಾ ರಹಸ್ಯ ಬೀಜಗಳಿರುವ ಪ್ಯಾಕೆಟ್ ಅನ್ನು ಕೊರಿಯರ್ ಮೂಲಕ ತಲುಪಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವು ಕೃಷಿ ವಿ.ವಿ. ಭಾರತೀಯ ಕೃಷಿ ಸಂಶೋಧನಾ ಮಂಡಳಿಗಳನ್ನು ಎಚ್ಚರಿಸಿದೆ. ಈ ಮೊದಲು ಅಮೆರಿಕ, ಕೆನಡಾ, ನ್ಯೂಜಿಲೆಂಡ್, ಜಪಾನ್ ನ ನೂರಾರು ಮನೆಗಳಿಗೆ ಚೀನಾದ ರಹಸ್ಯ ಪ್ಯಾಕೆಟ್ ತಲುಪಿದ್ದು, ಪ್ಯಾಕೆಟ್ ಗಳನ್ನು ಒಡೆಯದಂತೆ ಅಲ್ಲಿನ ಸರ್ಕಾರ ಸೂಚಿಸಿತ್ತು.