ಮಡಿಕೇರಿ : ಕೊಡಗಿನ ಭಾಗಮಂಡಲ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆಯುತ್ತಿರುವ ಆಪರೇಷನ್ ಬ್ರಹ್ಮಗಿರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಬೆಟ್ಟ ಕುಸಿತವಾದ ನಂತರ ಸರ್ಕಾರ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಒಬ್ಬರ ಮೃತದೇಹ ಸಿಕ್ಕಿದ ಮೇಲೆ ಮೂರು ದಿನಗಳಿಂದ ಎನ್ ಡಿಎಫ್ ಆರ್ ತಂಡ, ಪೊಲೀಸ್, ಅಗ್ನಿಶಾಮಕ ದಳದವರು ಸೇರಿ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ. ಅರ್ಚಕರ ಮನೆಯ ಮಂಚ, ಕುರ್ಚಿಗಳು 60 ಅಡಿಯ ಆಳದಲ್ಲಿ ಬಿದ್ದಿವೆ. ಈಗ ಆ ಪ್ರದೇಶದಲ್ಲೂ ಹುಡುಕಾಟ ಮಾಡುತ್ತಿದ್ದೀವಿ ಎಂದು ತಿಳಿಸಿದರು.
ಇನ್ನು ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತ ದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ ಎಂದ ಸಚಿವರು, ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದೆ. ಆದರೆ ಮಳೆ ಬರುತ್ತಿರುವುದರಿಂದ ವಾಸನೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಯಾವ ಯಾವ ರೀತಿ ಶೋಧಕಾರ್ಯ ಮಾಡಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸುವ ತೀರ್ಮಾನಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.








