ಶಿವಮೊಗ್ಗ : ಕಾಶಿ ಹಾಗೂ ಮಥುರಾದಲ್ಲಿರುವ ಮಸೀದಿಗಳು ಧ್ವಂಸವಾಗಬೇಕು, ಅಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಅಯೋಧ್ಯೆಯ ರೀತಿಯಲ್ಲೇ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದರು. ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದರು. ಇದಕ್ಕೆ ಇಂದು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಕೆ.ಎಸ್. ಈಶ್ವರಪ್ಪ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ ಕಳೆಯಲು ಸಿದ್ಧನಿದ್ದೇನೆ. ಡಿ.ಕೆ.ಶಿವಕುಮಾರ್ ಹೇಳಿದಂತೆ ನಾನು ಜೈಲಿಗೆ ಹೋಗಲು ರೆಡಿ. ನಾನು ನೂರು ಬಾರಿ ಬಂಧನಕ್ಕೊಳಗಾಗಲು ಸಿದ್ಧನಾಗಿದ್ದೇನೆ. ಬೇಕಾದರೆ ಇಡೀ ಜೀವನ ಜೈಲಲ್ಲೇ ಇರುತ್ತೇನೆ. ಅಯೋಧ್ಯೆಯ ರಾಮಮಂದಿರ ಶಿಲಾನ್ಯಾಸದ ದಿನ ನನ್ನ ಭಾವನೆಯನ್ನು ಹಂಚಿಕೊಂಡಿದ್ದೇನೆ ಎಂದಿದ್ದಾರೆ.
ನಾನು ಕಾಶಿ ಮತ್ತು ಮಥುರಾಕ್ಕೆ ಭೇಟಿ ನೀಡಿದ್ದೇನೆ. ಕೃಷ್ಣ ದೇವಾಲಯವನ್ನು ಒಡೆದು ಮಸೀದಿ ಕಟ್ಟಿರುವುದನ್ನು ನಾನು ನೋಡಿದ್ದೇನೆ. ಕಾಶಿಯಲ್ಲಿಯೂ ವಿಶ್ವನಾಥನ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ. ಅದನ್ನು ನೋಡಿ ನನಗೆ ನೋವಾಗಿದೆ, ಸಿಟ್ಟು ಕೂಡ ಬಂದಿದೆ ಎಂದು ಈಶ್ವರಪ್ಪ ಹೇಳಿದರು.
ಸರ್ಕಾರಗಳಿರುವುದು ಕೇವಲ ರಸ್ತೆ, ಚರಂಡಿ ನಿರ್ಮಾಣ ಮಾಡಲಿಕ್ಕೆ ಅಷ್ಟೇ ಅಲ್ಲ. ಈ ದೇಶದ ಜನರ ಅಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸವಾಗಿದೆ. ಅದರಂತೆ, ಈ ಎರಡೂ ಜಾಗದಲ್ಲಿಯೂ ಮಂದಿರ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ ಈಶ್ವರಪ್ಪ, ಇದು ಕೇವಲ ನನ್ನ ಭಾವನೆಯಷ್ಟೇ ಅಲ್ಲ ದೇಶದ ಜನರ ಅಪೇಕ್ಷೆ. ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳನ್ನು ನಾನು ಹೇಳಿದ್ದೇನೆ. ಕಾಶಿ ಹಾಗೂ ಮಥುರಾದಲ್ಲಿರುವ ಮಸೀದಿಗಳು ಧ್ವಂಸವಾಗಬೇಕು ಎಂದು ಪುನರುಚ್ಛರಿಸಿದ್ದಾರೆ.








