ಲಕ್ನೋ : ನಿನ್ನನ್ನು ಬಾಂಬ್ ಸ್ಫೋಟದಲ್ಲಿ ಕೊಲೆ ಮಾಡುವುದಾಗಿ ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗೆ ಪಾಕಿಸ್ತಾನದ ನಂಬರಿಂದ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆ ಅವರು ಸದರ್ ಕೊಟ್ಟಾಲಿಯ ಪೊಲೀಸ್ ಅಧಿಕಾರಿ ದಿನೇಶ್ ಚಂದ್ರ ಮಿಶ್ರಾ ಅವರಿಗೆ ದೂರು ನೀಡಿದ್ದಾರೆ.
ಸಾಕ್ಷಿ ಮಹಾರಾಜ್ ನೀಡಿದ ಲಿಖಿತ ದೂರಿನಲ್ಲಿ, ಪಾಕಿಸ್ತಾನದ ಕೆಲವು ಭಯೋತ್ಪಾದಕ ಸಂಘಟನೆಯಿಂದ ತನಗೆ ಎರಡು ದೂರವಾಣಿ ಕರೆಗಳು ಬಂದಿವೆ. ಕರೆಯಲ್ಲಿ ಬಾಂಬ್ ಸ್ಫೋಟದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆ ಕರೆ ಮಾಡಿರುವ ವ್ಯಕ್ತಿ, ಶೀಘ್ರವೇ ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ ಎಂದಿದ್ದು, ಅಯೋಧ್ಯೆ ರಾಮಮಂದಿರಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಕುರಿತು ಕೂಡ ಅಶ್ಲೀಲ ಭಾಷೆಯನ್ನು ಬಳಸಿದ್ದಾನೆ ಎಂದು ಸಂಸದರು ಪೊಲೀಸರ ಮುಂದೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ತಮಗೆ ರಕ್ಷಣೆ ನಿಡಬೇಕು ಎಂದು ಸಾಕ್ಷಿ ಮಹಾರಾಜ್ ಒತ್ತಾಯಿಸಿದ್ದಾರೆ.








