ಭಾರತೀಯ ರೈಲ್ವೆ ಕಪುರ್ಥಾಲಾದ ರೈಲ್ ಕೋಚ್ ಫ್ಯಾಕ್ಟರಿ, ರೈಲ್ವೆ ಬೋಗಿಗಳ ಪ್ರಸ್ತುತ ತೂಕವನ್ನು ಕಡಿಮೆ ಮಾಡಲು ಹಲವಾರು ವಿನ್ಯಾಸ ಸುಧಾರಣೆಗಳನ್ನು ಮಾಡುತ್ತಿದೆ. ಇದು ಹೆಚ್ಚು ಸುರಕ್ಷಿತ ಮತ್ತು ರೈಲ್ವೆಯ ವೇಗವನ್ನು ಹೆಚ್ಚಿಸಲು ಸಹಾಯವಾಗಲಿದೆ.

ಹೊಸದಿಲ್ಲಿ, ಅಗಸ್ಟ್ 12: ಮುಂದಿನ ವರ್ಷದಲ್ಲಿ , ಭಾರತೀಯ ರೈಲ್ವೆ ಹಗುರವಾದ ಬೋಗಿಗಳನ್ನು ಹೊಂದಲಿದ್ದು, ಇದು ಹೆಚ್ಚು ಸುರಕ್ಷಿತ ಮತ್ತು ರೈಲ್ವೆಯ ವೇಗವನ್ನು ಹೆಚ್ಚಿಸಲು ಸಹಾಯವಾಗಲಿದೆ. ರೈಲುಗಳು ಹೆಚ್ಚು ವೇಗವಾಗಿ ಚಲಿಸಲು ಮತ್ತು ಇಂಧನ ಉಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ, ಕಪುರ್ಥಾಲಾದ ರೈಲ್ ಕೋಚ್ ಫ್ಯಾಕ್ಟರಿ, ರೈಲ್ವೆ ಬೋಗಿಗಳ ಪ್ರಸ್ತುತ ತೂಕವನ್ನು ಕಡಿಮೆ ಮಾಡಲು ಹಲವಾರು ವಿನ್ಯಾಸ ಸುಧಾರಣೆಗಳನ್ನು ಮಾಡುತ್ತಿದೆ. ಆರ್‌ಸಿಎಫ್ ಹಂಚಿಕೊಂಡ ವಿವರಗಳ ಪ್ರಕಾರ, ಎಲ್‌ಎಚ್‌ಬಿ ಬೋಗಿಗಳ ವಿವಿಧ ರೂಪಾಂತರಗಳು ಸುಮಾರು 46 ಟನ್‌ಗಳಷ್ಟು ತೂಗುತ್ತವೆ. ತೂಕವನ್ನು ಕಡಿಮೆ ಮಾಡಲು, ವಿನ್ಯಾಸದಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ.
ಆರ್‌ಸಿಎಫ್ ಪ್ರಕಾರ, ಎಸಿ ಫಸ್ಟ್, ಎಸಿ 2 ಟೈರ್ ಮತ್ತು ಎಸಿ 3 ಟೈರ್ ಬೋಗಿಗಳಲ್ಲಿ, ಸೀಟುಗಳು ಮತ್ತು ಬೆರ್ತ್‌ಗಳಲ್ಲಿ ಬದಲಾವಣೆಗಳನ್ನು ಮಾಡಿದರೆ ಕ್ರಮವಾಗಿ 3 ಕ್ವಿಂಟಾಲ್, 6 ಕ್ವಿಂಟಾಲ್ ಮತ್ತು 6.7 ಕ್ವಿಂಟಾಲ್ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಅಲ್ಲದೆ, ಸ್ಲೀಪರ್ ಮತ್ತು ಜನರಲ್ ಬೋಗಿಗಳ ವಿಭಜನಾ ಚೌಕಟ್ಟನ್ನು ಹಗುರವಾದ ವಿಭಜನಾ ಚೌಕಟ್ಟಿನೊಂದಿಗೆ ಬದಲಾಯಿಸುವ ಮೂಲಕ ಈ ಬೋಗಿಗಳಲ್ಲಿ ತೂಕವನ್ನು ಗಣನೀಯವಾಗಿ ಕಡಿಮೆಗೊಳಿಸಲಾಗುತ್ತದೆ. ಟ್ರಾನ್ಸ್ಫಾರ್ಮರ್ಗಳು, ಬಯೋ ಟ್ಯಾಂಕ್ಗಳು, ಸ್ವಿಚ್ಬೋರ್ಡ್ ಕ್ಯಾಬಿನೆಟ್ಗಳು ಇತ್ಯಾದಿಗಳಲ್ಲಿ ರಚನಾತ್ಮಕ ಮತ್ತು ವಿನ್ಯಾಸ ಬದಲಾವಣೆಗಳ ಮೂಲಕ ತೂಕವನ್ನು ಕಡಿಮೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ವರ್ಷ, ಹೆಚ್ಚಿನ ಸಾಮರ್ಥ್ಯದ ಪಾರ್ಸೆಲ್ ವ್ಯಾನ್‌ಗಳ ಉತ್ಪಾದನೆಯನ್ನು ಆರ್‌ಸಿಎಫ್ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಿದೆ. ಎಲ್ಲಾ ದೂರದ ಪ್ರಯಾಣದ ರೈಲುಗಳಲ್ಲಿ, ಸರಕುಗಳ ಸರಬರಾಜನ್ನು ತ್ವರಿತಗೊಳಿಸಲು ಈ ಬೋಗಿಗಳನ್ನು ಅಳವಡಿಸಲಾಗಿದೆ. ಇನ್ನು ಲಗೇಜ್ ಸ್ಟಾಂಡ್, ಫಲಕಗಳು, ನೆಲಹಾಸು ಇತ್ಯಾದಿಗಳನ್ನು ಸಹ ಬದಲಾಯಿಸುತ್ತಿದ್ದು . ಇದರೊಂದಿಗೆ, ತೂಕವನ್ನು 1.5 ಟನ್‌ಗಳಷ್ಟು ಕಡಿಮೆಗೊಳಿಸಲಾಗುತ್ತದೆ ಮತ್ತು ಈ ಪಾರ್ಸೆಲ್ ವ್ಯಾನ್‌ಗಳ ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದು ಆರ್‌ಸಿಎಫ್ ಹೇಳಿದೆ.








