ಬೆಂಗಳೂರಲ್ಲಿ ಪುಂಡರ ಪುಂಡಾಟ
ಪೊಲೀಸರ ವಶದಲ್ಲಿರುವ ಅಖಂಡ ಶ್ರೀನಿವಾಸ್ ಮೂರ್ತಿ ಅಳಿಯ ನವೀನ್
ಕಾವಲ್ಭೈರಸಂದ್ರ ಘಟನೆಯ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಗೃಹ ಸಚಿವ
ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಸೂಚನೆ ನೀಡಿರುವ ಸಿಎಂ
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಲು ಮುಂದಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯ ಸೂಚನೆ ನೀಡಿದ್ದಾರೆ. ಕಾವಲ್ ಬೈರಸಂದ್ರದಲ್ಲಿರುವ ಶಾಸಕ ಶ್ರೀನಿವಾಸ್ ಮೂರ್ತಿಯವರ ಮನೆಗೆ ಏಕಾಏಕಿ ಧಾವಿಸಿದ್ದ ನೂರಾರು ಮಂದಿ ಕಿಡಿಗೇಡಿಗಳು ಬೆಂಕಿ ಹಚ್ಚಿ ದಾಂಧಾಲೆ ನಡೆಸಿದ್ದರು. ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಈ ರೀತಿ ದಾಂಧಲೆ ನಡೆಸಿ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಮುಲಾಜಿ ಇಲ್ಲದೆ ಕ್ರಮತೆಗೆದುಕೊಳ್ಳಬೇಕು. ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ಕೆಎಸ್ಆರ್ಪಿ ತುಕಡಿಯನ್ನು ಕೂಡ ನಿಯೋಜಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಮಾಹಿತಿ ಕೂಡ ನೀಡಿದ್ದಾರೆ.
ಮೊದಲು ಪರಿಸ್ಥಿತಿಯನ್ನು ಹತೋಟಿಗೆ ತನ್ನಿ. ಸಾರ್ವಜನಿಕ ಆಸ್ತಿ ನಷ್ಟವಾಗದಂತೆ ನೋಡಿಕೊಳ್ಳಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಿ ಎಂದು ಸಿಎಂ ಬಿಎಸ್ವೈ ಬಸವರಾಜು ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದಾರೆ.
ಇನ್ನು ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿರುವ ಅಖಂಡ ಶ್ರೀನಿವಾಸ್ ಮೂರ್ತಿಯವರ ತಂಗಿಯ ಮಗ ನವೀನ್ನನ್ನು ಕೆಜಿ ಹಳ್ಳಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಈ ಘಟನೆಯನ್ನು ಕೆಪಿಸಿಸಿ ಖಂಡಿಸಿದೆ. ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಿ. ಸಂಯಮದಿಂದ ಇರಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೆ ಎಂದು ಕೆಪಿಸಿಸಿ ಟ್ವಿಟ್ ಮೂಲಕ ಹೇಳಿದೆ.
ಹಾಗೇ ಚಾಮರಾಜನಗರ ಶಾಸಕ ಜಮೀರ್ ಅಹಮ್ಮದ್ ಕೂಡ ಶಾಂತಿ ಕಾಪಾಡಿಕೊಳ್ಳಿ ಎಂದು ಟ್ವಿಟ್ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ಯಾರು ಕೂಡ ತಾಳ್ಮೆಯ ಕಳೆದುಕೊಳ್ಳಬೇಡಿ. ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಜಮೀರ್ ಅಹಮ್ಮದ್ ಟ್ವಿಟ್ ಮಾಡಿದ್ದಾರೆ.