ಬೆಂಗಳೂರಲ್ಲಿ ಪುಂಡರ ಪುಂಡಾಟ | ಘಟನೆ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು : ನಿನ್ನೆ ರಾತ್ರಿ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಶಾಸಕರ ಮನೆ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿಯ ಕುಕೃತ್ಯವನ್ನು ಖಂಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಕೃತ್ಯವನ್ನು ನಾನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಇವರು ಸಮಾಜದ ಘಾತುಕರು. ಶಾಸಕರಾಗಿರಬಹುದು, ಯಾರೇ ಇರಬಹುದು ಆಸ್ತಿ ಪಾಸ್ತಿ ಹಾನಿ ಮಾಡುವ ಕೆಲಸವನ್ನು ಸಹಿಸುವುದಿಲ್ಲ. ಪೊಲೀಸ್ ಸ್ಟೇಷನ್ ಮೇಲೆಯೂ ದಾಳಿ ನಡೆದಿದೆ. ಕಾನೂನನ್ನು ಕೈಗೆ ತೆಗದುಕೊಳ್ಳುವ ಕೆಲಸ ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಈ ಘಟನೆಗೆ ಪ್ರಚೋದನಾಕಾರಿ ಟ್ವೀಟ್ ಮಾಡಿದ್ದು ಕಾರಣ ಎಂದು ಮಾಧ್ಯಮದ ಮೂಲಕ ತಿಳಿದಿದೆ. ಎಲ್ಲವೂ ತಪ್ಪೇ. ಯಾರು ಮಾಡಿದರೂ ತಪ್ಪೇ ಎಂದ ಡಿಕೆಶಿ, ನಮ್ಮ ಶಾಸಕರು ಹೋಗಿ ಗಲಭೆ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಯಾರೂ ಯಾರ ನಿಯಂತ್ರಣಕ್ಕೂ ಸಿಕ್ಕಿಲ್ಲ. ಘಟನೆಯಲ್ಲಿ ಬಹಳ ವ್ಯವಸ್ಥಿತ ಸಂಚು ಇದೆ ಎನ್ನುವುದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಸರ್ಕಾರ ಕಾನೂನು ಮೂಲಕ ಏನು ಕ್ರಮ ತೆಗೆದುಕೊಳ್ಳಬೇಕೋ ಕೈಗೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಅದಕ್ಕೆ ಸಹಕಾರ ನೀಡುತ್ತೇವೆ ಎಂದರು.
ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದಿದ್ದರೂ ಕಾಂಗ್ರೆಸ್ ಮೌನ ವಹಿಸಿದೆ ಎಂಬ ಬಿಜೆಪಿಗರ ಟೀಕೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಬಿ.ಎಲ್. ಸಂತೋಷ್ ಟೀಕೆಗೆ ಹಾಗೂ ಸಿ.ಟಿ. ರವಿ ಹೇಳಿಕೆಗೆ ನಾನು ಉತ್ತರ ನೀಡಲು ತಯಾರಿಲ್ಲ. ಮುಖ್ಯಮಂತ್ರಿಗಳ ಟ್ವೀಟ್ ಅನ್ನೂ ಗಮನಿಸಿದ್ದೇನೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಬೇಕು. ಶಾಶಕರ ಮನೆಗೂ ಭೇಟಿ ನೀಡಿ ಚರ್ಚೆ ನಡೆಸಬೇಕಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದು, ಬೇರೆಯವರ ಬಗ್ಗೆ ಮಾತನಾಡಿ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.








