ಸ್ಪುಟ್ನಿಕ್ ವಿ ಲಸಿಕೆಗಾಗಿ ಭಾರತ ಸೇರಿದಂತೆ 20 ದೇಶಗಳಿಂದ ಬೇಡಿಕೆಗಳು ಬಂದಿವೆ ಎಂದು ರಷ್ಯಾ ಹೇಳಿದೆ. ಕೊರೋನಾ ವೈರಸ್ ಸೋಂಕನ್ನು ನಿಯಂತ್ರಿಸಲು ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.
ಹೊಸದಿಲ್ಲಿ, ಅಗಸ್ಟ್ 12 : ಕೊರೋನವೈರಸ್ ಗೆ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೊದಲ ಲಸಿಕೆಯನ್ನು ದೇಶ ಅಭಿವೃದ್ಧಿಪಡಿಸಿದೆ ಎಂದು ರಷ್ಯಾ ಘೋಷಿಸಿದ ಕೆಲವೇ ಗಂಟೆಗಳ ಬಳಿಕ , ಮಂಗಳವಾರ 20 ದೇಶಗಳಿಂದ ಒಂದು ಬಿಲಿಯನ್ ಡೋಸ್ ಲಸಿಕೆಗಾಗಿ ಬೇಡಿಕೆಗಳು ಬಂದಿವೆ ಎಂದು ಹೇಳಿದೆ. ‘ಸ್ಪುಟ್ನಿಕ್ ವಿ’ ಎಂದು ಕರೆಯಲ್ಪಡುವ ಈ ಲಸಿಕೆ ಕೊರೋನಾ-19 ವಿರುದ್ಧ ಪ್ರತಿಕಾಯಗಳನ್ನು ರೂಪಿಸುತ್ತದೆ ಎಂದು ರಷ್ಯಾ ಹೇಳಿದೆ.

ಲಸಿಕೆ ಯೋಜನೆಗೆ ಹಣಕಾಸು ಒದಗಿಸುವ ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿಯೆವ್, ಲಸಿಕೆಯ 3 ನೇ ಹಂತದ ಪ್ರಯೋಗಗಳು ಬುಧವಾರದಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್‌ನಿಂದ ಕೈಗಾರಿಕಾ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಲಸಿಕೆ ಉತ್ಪಾದನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿರುವ ಕಿರಿಲ್ ಡಿಮಿಟ್ರಿಯೆವ್, ರಷ್ಯಾ ಮತ್ತು ವಿಶ್ವದ ಐದು ದೇಶಗಳಲ್ಲಿ ವರ್ಷಕ್ಕೆ 500 ಮಿಲಿಯನ್ ಡೋಸ್ ಲಸಿಕೆ ತಯಾರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಲಸಿಕೆ ಬಗ್ಗೆ ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್, ಭಾರತ ಮತ್ತು ಫಿಲಿಪೈನ್ಸ್ ಸೇರಿದಂತೆ ಇತರ ದೇಶಗಳು ಆಸಕ್ತಿ ತೋರಿಸಿವೆ ಎಂದು ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶವು ಕೋವಿಡ್-19 ವಿರುದ್ಧ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಘೋಷಿಸಿದ್ದು, ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬರು ಈ ಪ್ರಯೋಗದಲ್ಲಿ ಪಾಲ್ಗೊಂಡರು ಮತ್ತು ಆಕೆಗೆ ಕೊರೋನವೈರಸ್ ವಿರುದ್ಧ ಸ್ಪುಟ್ನಿಕ್ ವಿ ಲಸಿಕೆ ನೀಡಲಾಯಿತು ಎಂದು ಹೇಳಿದರು.
ಮೊದಲ ವ್ಯಾಕ್ಸಿನೇಷನ್ ನಂತರ, ಅವಳು 100.4 ಡಿಗ್ರಿ ಫ್ಯಾರನ್ ಹೀಟ್ ದೇಹದ ಉಷ್ಣತೆಯನ್ನು ಹೊಂದಿದ್ದಳು, ಆದರೆ ಮರುದಿನ ಅದು 98.6 ಡಿಗ್ರಿಗಿಳಿಯಿತು. ಎರಡನೇ ಚುಚ್ಚುಮದ್ದಿನ ನಂತರ, ಎರಡನೇ ವ್ಯಾಕ್ಸಿನೇಷನ್ ನಂತರ, ಆಕೆ ಸಂಪೂರ್ಣ ಗುಣಮುಖಳಾದದ್ದು, ಮಾತ್ರವಲ್ಲದೆ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿದ್ದವು ಎಂದು ಪುಟಿನ್ ಹೇಳಿದ್ದಾರೆ.
ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಅವರು ಕೊರೋನವೈರಸ್ ವಿರುದ್ಧದ ಮೊದಲ ರಷ್ಯಾದ ಲಸಿಕೆ ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ಬಿನ್ನೋಫಾರ್ಮ್ ಎಂಬ ಎರಡು ತಾಣಗಳಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಜೂನ್ 18 ರಂದು ಪ್ರಾರಂಭವಾಯಿತು ಮತ್ತು 38 ಸ್ವಯಂಸೇವಕರಿಗೆ ಲಸಿಕೆಯನ್ನು ನೀಡಲಾಯಿತು. ಅವರೆಲ್ಲರೂ ಸೋಂಕಿನಿಂದ ಗುಣಮುಖರಾಗಿದ್ದು, ಮೊದಲ ಗುಂಪನ್ನು ಜುಲೈ 15 ರಂದು ಬಿಡುಗಡೆ ಮಾಡಲಾಯಿತು, ಎರಡನೇ ಗುಂಪನ್ನು ಜುಲೈ 20 ರಂದು ಬಿಡುಗಡೆ ಮಾಡಲಾಯಿತು.
ಈ ನಡುವೆ ಲಸಿಕೆಯ ಬಗ್ಗೆ ಅಂತಾರಾಷ್ಟ್ರೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಮಾನವರ ಮೇಲಿನ ಪ್ರಯೋಗ ಸಂಪೂರ್ಣವಾಗುವ ಮೊದಲು ಅದನ್ನು ಬಳಕೆ ಮಾಡುವುದು ಅಪಾಯಕಾರಿ. ರಷ್ಯಾ ಜಾಗತಿಕ ಹೆಗ್ಗಳಿಕೆಯನ್ನು ಪಡೆಯಲು ಜನರ ಜೀವದ ಜೊತೆಗೆ ಚೆಲ್ಲಾಟವಾಡಲು ಪ್ರಯತ್ನಿಸುತ್ತಿದೆ ಎಂದು ಆರೋಗ್ಯ ತಜ್ಞರು, ಫಾರ್ಮಾಸುಟಿಕಲ್ ಕಂಪನಿಗಳು ಆರೋಪಿಸಿವೆ.








