ಇತ್ತೀಚೆಗೆ ಹೊಸ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ ನರೇಂದ್ರ ಮೋದಿ ಸರ್ಕಾರವು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಲು ಹೊರಟಿದೆ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಯಿಂದ ಸಲಹೆಗಳನ್ನು ಕೋರಿದೆ.
ಹೊಸದಿಲ್ಲಿ, ಅಗಸ್ಟ್ 12: ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಜ್ಜಾಗಿದೆ. ವರದಿಗಳ ಪ್ರಕಾರ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಆನ್‌ಲೈನ್ ಶಿಕ್ಷಣ ವ್ಯವಸ್ಥೆಯಾಗಿ ಪರಿವರ್ತಿಸಲು ಕೇಂದ್ರವು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಅಗತ್ಯವಿರುವುದಿಲ್ಲ ಮತ್ತು ಇದು ಶಿಕ್ಷಣ ಸಂಸ್ಥೆಗಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ.

ಐಐಟಿಗಳು ಮತ್ತು ಐಐಎಂಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆನ್‌ಲೈನ್ ಶಿಕ್ಷಣ ವ್ಯವಸ್ಥೆಯ ಭಾಗವಾಗಿಸಲು ಕೇಂದ್ರವು ಉದ್ದೇಶಿಸಿದೆ. ಮೂಲಗಳ ಪ್ರಕಾರ, ಪಿಎಂಒ ಮತ್ತು ನೀತಿ ಆಯೋಗ್ ಈ ನಿಟ್ಟಿನಲ್ಲಿ ಯುಜಿಸಿ ಮತ್ತು ಎಐಸಿಟಿಇಯಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಿದ್ದಾರೆ.
ಯೋಜನೆಯ ಭಾಗವಾಗಿ, ಈ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸಲು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದೇ ಮತ್ತು ಯುಜಿಸಿ ಉಪಾಧ್ಯಕ್ಷರಾಗಿರುವ ಡಾ ಎಂಪಿ ಪೂನಿಯಾ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆನ್‌ಲೈನ್ ಶಿಕ್ಷಣವನ್ನು ನೀಡಲು ಡಿಜಿಟಲ್ ವೇದಿಕೆಯನ್ನು ನಿರ್ಮಿಸುವ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಕೆಲಸವನ್ನು ಈ ಇಬ್ಬರು ಮುಖ್ಯಸ್ಥರಿಗೆ ವಹಿಸಲಾಗಿದೆ.

ಎಲ್ಲಾ ಉಪಕುಲಪತಿಗಳು ಮತ್ತು ಸಂಸ್ಥೆಗಳ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ, ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದೇ ಅವರು ಭಾರತವನ್ನು ‘ಸ್ವಾವಲಂಬಿಗಳನ್ನಾಗಿ’ ಮಾಡಲು ಮತ್ತು ‘ಆತ್ಮಾ ನಿರ್ಭರ ಭಾರತ್ ’ ಎಂಬ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಸಹಾಯ ಮಾಡುವಂತೆ ಇತ್ತೀಚೆಗೆ ಒತ್ತಾಯಿಸಿದ್ದಾರೆ.








