ಮುಂಬೈಗೆ ಹೋಗುವ ಕನಸು ನನಸಾಗಿಸಲು ತನ್ನ ಮಗುವನ್ನು 45,000 ರೂ ಮಾರಾಟ ಮಾಡಿದ ತಾಯಿ
ಹೈದರಾಬಾದ್, ಅಗಸ್ಟ್ 13: ಮುಂಬೈಗೆ ಹೋಗಬೇಕೆಂಬ ತನ್ನ ಕನಸನ್ನು ನನಸಾಗಿಸಲು ತನ್ನ ಎರಡು ತಿಂಗಳ ಮಗುವನ್ನು 45,000 ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದಕ್ಕಾಗಿ 22 ವರ್ಷದ ಮಹಿಳೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಹೈದರಾಬಾದ್‌ನ ಹಬೀಬ್‌ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ವರದಿಯಾಗಿದೆ.
ದೂರು ಸ್ವೀಕರಿಸಿದ 24 ಗಂಟೆಗಳಲ್ಲಿ, ನವಜಾತ ಶಿಶುವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು ಮತ್ತು ಮಗುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಯಿಯನ್ನು ಸಹ ಬಂಧಿಸಿದ್ದಾರೆ.

22 ವರ್ಷದ ಶೇಖ್ ಜೋಯಾ ಖಾನ್ ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಏಕಾಂಗಿಯಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದು, ಮುಂಬೈಗೆ ಹೋಗುವುದು ಅವಳ ಬಹು ಕಾಲದ ಆಸೆಯಾಗಿತ್ತು. ಮಗುವನ್ನು ಸಾಕಲು ತೊಂದರೆಗಳನ್ನು ಎದುರಿಸುತ್ತಿದ್ದ ಶೇಖ್ ಜೋಯಾ ಖಾನ್ ತನ್ನ ಗಂಡು ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದಳು.
ಮಂಗಳವಾರ, ಮಗುವಿನ ತಂದೆ ಅಬ್ದುಲ್ ಮುಜಾಹೀದ್, ತನ್ನ ಹೆಂಡತಿ ತಮ್ಮ ಮಗನನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ತಿಳಿದು ಪೊಲೀಸರನ್ನು ಸಂಪರ್ಕಿಸಿದರು. ಮಗುವನ್ನು ಖರೀದಿಸಿದ ಕುಟುಂಬ ಮತ್ತು ಒಪ್ಪಂದವನ್ನು ಏರ್ಪಡಿಸಿದ್ದ ಮಧ್ಯವರ್ತಿಯೊಂದಿಗೆ ಪೊಲೀಸರು ತಾಯಿ ಮತ್ತು ಇತರ ಐದು ಜನರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಂತರ ಮಗುವನ್ನು ಪೊಲೀಸರು ತಂದೆಗೆ ಒಪ್ಪಿಸಿದರು.








