16 ರಿಂದ 18ನೇ ಶತಮಾನದ ಕರ್ನಾಟಕದ ಶ್ರೀಮಂತ ರಾಜಸಂಸ್ಥಾನವಾಗಿದ್ದ ಬಿದನೂರು ಸಂಸ್ಥಾನದ ಕುರಿತು ಹುಟ್ಟಿಕೊಂಡ ಪ್ರಶ್ನೆಗಳು:
ಕೊನೆಯ ಹಿಂದು ಸಾಮ್ರಾಜ್ಯ ಎಂದೇ ಕರೆಯಲ್ಪಡುವ ವಿಜಯನಗರ ಸಾಮ್ರಾಜ್ಯದ ಪತನದ ನಂತರದಲ್ಲಿ ಕನ್ನಡ ಭಾಷೆ, ನುಡಿ, ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಜೀವನಶೈಲಿಯ ರಕ್ಷಣೆಗೆ ತಲೆ ಎತ್ತಿ ನಿಂತವರು “ಇಕ್ಕೇರಿ ನಾಯಕರು”. ಇತಿಹಾಸದ ಪುಟಗಳಲ್ಲಿ ಒಮ್ಮೆ ಹಣಕುಹಾಕಿದರೆ ವಿಜಯನಗರದ ನಂತರ ಕರ್ನಾಟಕದ ಅತ್ಯಂತ ಶ್ರೀಮಂತ ರಾಜ್ಯವಾಗಿ ಕಾರ್ಯನಿರ್ವಹಿಸಿದ್ದು ನಮ್ಮ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಆಳ್ವಿಕೆ ಮಾಡಿದ “ಇಕ್ಕೇರಿ ನಾಯಕರು”. ಆದರೆ ವಿಪರ್ಯಾಸವೆಂದರೆ ಇಂದು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ನಮ್ಮನ್ನು ಆಳಿದ ಈ ರಾಜಮನೆತನದ ಬಗ್ಗೆ ಯಾರಿಗೂ ಸಮಗ್ರವಾದ ಮಾಹಿತಿಯೇ ಇಲ್ಲ ಇನ್ನೂ ಅಭಿಮಾನ?
ನಮ್ಮ ಮಲೆನಾಡಿನ ಇತಿಹಾಸವನ್ನು ಹೊಸಕಿ ಹಾಕುವಲ್ಲಿ ಮಾಯಾವಿಗಳು ದೊಡ್ಡ ಪಾತ್ರ ವಹಿಸುತ್ತಾರೆ. ಬ್ರಿಟೀಷರು ಕರ್ನಾಟಕದಲ್ಲಿ ನೆರೆಯೂರಲು ನಡೆಸಿದ ಯುದ್ಧದಲ್ಲಿ ಸತ್ತ ನರಿಯ ಇತಿಹಾಸವನ್ನು ವಿಜೃಂಭಿಸಿ ಆ ಮೂಲಕ ತಮ್ಮ ಇತಿಹಾಸವನ್ನು ವೈಭವೀಕರಿಸಲು ಮುಂದಾದರೆ ಕರ್ನಾಟಕದ ಇತಿಹಾಸದ ಪುಟಗಳಿಂದ ನಮ್ಮ ಮಲೆನಾಡಿನ ಇತಿಹಾಸವನ್ನು ಅಳಿಸಿ ಹಾಕಲು ದೂರದ ಶ್ರೀರಂಗಪಟ್ಟಣದಲ್ಲಿ ದೊಡ್ಡ ಸಂಚು ನಡೆದು ಹೋಗುತ್ತದೆ. ನಮ್ಮ ಮಲೆನಾಡಿನ ಮರೆತು ಹೋದ ಇತಿಹಾಸವನ್ನು ಮತ್ತೆ ಜನರ ಮುಂದೆ ತರಲು ಯತ್ನಿಸಬೇಕಾದ ಸಮಯ ಒದಗಿ ಬಂದಿದೆ. ಇನ್ನೂ ನಮ್ಮ ಇಕ್ಕೇರಿ ನಾಯಕರ ಮತ್ತು ಮಲೆನಾಡು ಹಾಗೂ ಕರಾವಳಿಯ ಇತಿಹಾಸವನ್ನು ಅರಿಯಲು ನಮ್ಮಲ್ಲಿ ಸಾಕಷ್ಟು ಸಾಹಿತ್ಯ ಗ್ರಂಥಗಳು ಮತ್ತು ಶಾಸನಗಳು ಇವೆ.
ಆದರೆ ನನಗೆ ನನ್ನ ಮೊದಲ ಇತಿಹಾಸ ಪ್ರಾಧ್ಯಾಪಕರಾದ ಶ್ರೀ ತಾತಾಚಾರ್ಯ ಅವರ ಒಂದು ಮಾತು ನೆನಪಿಗೆ ಬರುತ್ತದೆ – ‘ಯಾವುದೇ ರಾಜ್ಯದ, ರಾಜನ, ವ್ಯಕ್ತಿಯ ಮತ್ತು ಪ್ರದೇಶದ ಇತಿಹಾಸವನ್ನು ಅಧ್ಯಯನ ಮಾಡುವಾಗ ಆ ಇತಿಹಾಸ ನಡೆದ ಕಾಲಘಟ್ಟದಲ್ಲಿ ಅಸ್ತಿತ್ವದಲ್ಲಿ ಇದ್ದ ರಾಜಕೀಯ ಸನ್ನಿವೇಶವನ್ನು ತಿಳಿದುಕೊಳ್ಳ ಬೇಕು ಮತ್ತು ಯಾವುದೇ ರಾಜ್ಯದ/ರಾಜನ/ರಾಜ ಮನೆತನದ ಒಳ್ಳೆಯ ವಿಚಾರಗಳು ಅವರ ಸಾಹಿತ್ಯ ಗ್ರಂಥ ಮತ್ತು ಶಾಸನಗಳಿಂದ ಸಿಕ್ಕರೆ ಕೆಲವು ಸೂಕ್ಷ್ಮ ವಿಚಾರಗಳು, ನಡೆದು ಹೋದ ಕೆಲವು ಕಹಿ ಘಟನೆಗಳನ್ನು ಆ ಕಾಲಘಟ್ಟದ ನೆರೆಯ ರಾಜ್ಯದ ಇತಿಹಾಸದ ಪುಟಗಳಲ್ಲಿ ಕಾಣಬಹುದು’. ನಾಣ್ಯದ ಎರಡು ಮುಖಗಳಂತೆ ಎಲ್ಲಾ ರಾಜ್ಯದ ಇತಿಹಾಸ ಮತ್ತು ಅದರ ರಾಜನ ಚರಿತ್ರೆಗೆ ಸಂಬಂಧಿಸಿದ ಇತಿಹಾಸಕ್ಕೆ ಎರಡು ಆಯಾಮಗಳು ಇರುತ್ತವೆ. ಒಬ್ಬ ನೈಜ ಇತಿಹಾಸಕಾರ ಎರಡು ಮುಖಗಳನ್ನು ನೋಡಿಯೇ ಇತಿಹಾಸವನ್ನು ಅಧ್ಯಯನ ಮಾಡಬೇಕು.
ನಮ್ಮ ಇಕ್ಕೇರಿ ನಾಯಕರ ಇತಿಹಾಸದ ಪುಟಗಳು ನಮ್ಮಲ್ಲಿ ಬಿಟ್ಟರೆ ಅಂದಿನ ನೆರೆ ರಾಜ್ಯಗಳಾದ ಮರಾಠಾ, ಬಿಜಾಪುರ (ಆದಿಲ್ ಶಾಯಿ), ಮಲಬಾರ್ ರಾಜ್ಯಗಳು ಮತ್ತು ಮೈಸೂರಿನ ಸಾಹಿತ್ಯ ಗ್ರಂಥಗಳು ಮತ್ತು ದಾಖಲೆಗಳಲ್ಲಿ ಕಾಣಬರುತ್ತದೆ. ನಮ್ಮ ನಾಯಕರ ಜೊತೆಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ, ಡಚ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೋರ್ಚುಗೀಸ್ ಅವರಲ್ಲಿಯು ದಾಖಲೆಗಳು ಇದ್ದು ಇವುಗಳು ನಮ್ಮ ಮಲೆನಾಡಿನ ಇಕ್ಕೇರಿ ನಾಯಕರ ಬಗ್ಗೆ ಹಲವಾರು ರೋಚಕ ಮಾಹಿತಿಯನ್ನು ನೀಡುತ್ತದೆ. ಸಂತೋಷದ ವಿಷಯ ಅಂದರೆ ಇದರಲ್ಲಿ ನನಗೆ ಲಂಡನ್ ಮತ್ತು ಡಚ್ ದೇಶದ ಆರ್ಕೈವ್ (archives) ನಲ್ಲಿ ಇದ್ದ ಕೆಲವು ದಾಖಲೆಗಳು ಕೈ ಸೇರಿದೆ. ಇವುಗಳಲ್ಲಿ ನಮ್ಮ ಬಿದನೂರಿನ ನಾಯಕರ ಬಗ್ಗೆ ಕೇಳಿ ಅರಿಯದ ಮಾಹಿತಿಗಳನ್ನು ನೋಡಬಹುದು. ಯಾವುದೇ ರಾಜಮನೆತನವೇ ಇರಲಿ ಅವರ ಒಳ್ಳೆಯ ವಿಷಯವನ್ನು ಅವರೆ ಬರೆದು ಕೊಳ್ಳುತ್ತಾರೆ ಆದರೆ ಕೆಲವು ಸೂಕ್ಷ್ಮ ವಿಚಾರಗಳನ್ನು ಮರೆಮಾಚುವಾಗ ಅವುಗಳನ್ನು ಆ ರಾಜ್ಯದ ಪಕ್ಕದ ರಾಜ್ಯಗಳ ಗ್ರಂಥಗಳಲ್ಲಿ ಅಥವಾ ಅವರ ಜೊತೆಗೆ ವ್ಯಾಪಾರ ಹೊಂದಿದ ಡಚ್, ಆಂಗ್ಲ ಅಥವಾ ಪೋರ್ಚುಗೀಸ್ ಅವರ ದಾಖಲೆಗಳಲ್ಲಿ ಅದನ್ನು ನಾವು ಕಾಣಬಹುದು. ಮುಂದಿನ ದಿನಗಳಲ್ಲಿ ಇವುಗಳನ್ನು ಹಂತ ಹಂತವಾಗಿ ಹಂಚಿಕೊಳ್ಳಲು ಬಯಸುವೆ.
ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲು ಬಯಸುವ ಕೆಲವು ರೋಚಕ ಮಾಹಿತಿಗಳು ಈ ಕೆಳಕಂಡಂತೆ ಇರುತ್ತದೆ:-
ವಿಜಯನಗರದ ಪತನದ ನಂತರ (1565) ಇಕ್ಕೇರಿ ನಾಯಕರಲ್ಲಿ ಪಟ್ಟಗೋಸ್ಕರ ಯಾವ ಯಾವ ರೀತಿಯಲ್ಲಿ ಕಲಹಗಳು ಏರ್ಪಟ್ಟವು? ಚಿಕ್ಕ ಸಂಕಣ್ಣ ನಾಯಕರಿಂದ ಹಿಡಿದು ಕೊನೆಯ ರಾಜ ಮುಮ್ಮಡಿ ಸೋಮಶೇಖರ ನಾಯಕನ ವರೆಗೂ ಆಳಿದ ರಾಜರಲ್ಲಿ ಎಷ್ಟು ಜನ ನೈಜ ಸಾವನ್ನು ಪಡೆದರು ಗೊತ್ತೇ? ವಿಜಯನಗರ ಸಾಮ್ರಾಜ್ಯವನ್ನು 4 ಮನೆತನಗಳು ಆಳುತ್ತವೆ ಹಾಗಾದರೆ ನಮ್ಮ ಇಕ್ಕೇರಿ ಸಂಸ್ಥಾನ ಮತ್ತು ಬಿದನೂರು ಸಂಸ್ಥಾನವನ್ನು ಒಂದೇ ಮನೆತನದವರು ಆಳ್ವಿಕೆ ಮಾಡಿದ್ದರೇ? ರಾಣಿ ಚೆನ್ನಮ್ಮಾಜಿ ಸತಿ ಪದ್ಧತಿಯಿಂದ ಹೇಗೆ ಪಾರಾದಳು? ನಾವು ಅಂದುಕೊಂಡಂತೆ ಮುಂದೆ ಬಿದನೂರಿನಲ್ಲಿ ಸತಿ ಪದ್ಧತಿ ನಡೆಯುದಿಲ್ಲವೇ? ಹಿರಿಯ ಸೋಮಶೇಖರ ಮರಣಹೊಂದಿದಾಗ ಚೆನ್ನಮ್ಮಾಜಿಗೆ ಎಷ್ಟು ವಯಸ್ಸು, ಅವಳ ಹಿಂದೆ ನಿಂತ ಆ ಶಕ್ತಿ ಯಾರು?
ಬಿದನೂರಿನ ಕೊನೆಯ ಕಾಲಘಟ್ಟದ ಇತಿಹಾಸದಲ್ಲಿ ವಾಸ್ತವ ಆಡಳಿತಗಾರರಾಗಿ (de facto ruler) ಕಾರ್ಯನಿರ್ವಹಿಸಿದ ಮೋಣಪ್ಪ ಶೆಟ್ಟರ ಮಕ್ಕಳಾದ ನಿರ್ವಾಣಯ್ಯ ಮತ್ತು ಗುರುವಪ್ಪ ಯಾರು? ಕಾಸರಗೋಡು ತಿಮ್ಮಣ್ಣನಾಯಕ ಮತ್ತು ಸುಬ್ಬನ್ನೀಸ ಕೃಷ್ಣಪ್ಪಯ್ಯ ಪಟ್ಟಾಭಿಷೇಕ ಮಾಡಿದ ಕಸಿಯಾ ಭದ್ರಪ್ಪ ಯಾರು? ಕಾಸರಗೋಡು ತಿಮ್ಮಣ್ಣನಾಯಕ ಯಾರು? ಅವನನ್ನು ಕರಾವಳಿ ಪ್ರದೇಶಗಳಲ್ಲಿ ಕಾಸರಗೋಡು ತಿಮ್ಮ ಅರಸ ನಾಯಕ ಎಂದು ಏಕೆ ಕರೆಯುತ್ತಾರೆ, ಕರಾವಳಿ ಸೀಮೆಯ ಮೇಲೆ ಅವನ ಪ್ರಭಾವ ಏನಿತ್ತು? ಪಟ್ಟ ಏರಲು ಡಚ್ ಮತ್ತು ಪೋರ್ಚುಗೀಸ್ ಅವರ ನೆರವು ಕೇಳಿದ ಸದಾಶಿವ ನಾಯಕ ಯಾರು?
೧೭೯೯ರಲ್ಲಿ ಟಿಪ್ಪು ಸುಲ್ತಾನ್ ಪತನದ ನಂತರ ಕೊಡಗಿನ ಹಾಲೇರಿ ವಂಶಜರು ಬಿದನೂರು ಸಂಸ್ಥಾನದ ಯಾವ ಮನೆತನದ ಪರವಾಗಿ ರಾಜ್ಯ ಹಿಂದಿರುಗಿಸಲು ಬ್ರಿಟೀಷ್ ಸರ್ಕಾರಕ್ಕೆ ಮನವಿ ಮಾಡುತ್ತಾರೆ? ನಗರ ಧಂಗೆಯ ನಂತರದಲ್ಲಿ ಬಿದನೂರಿನ ಯಾವ ಮನೆತನದವರು ಬ್ರಿಟೀಷ್ ಸರಕಾರದಿಂದ ಮಾಶಾಸನಕ್ಕಾಗಿ
ಮನವಿಯನ್ನು ಸಲ್ಲಿಸಿದರು – ಮೂಲ ಮನೆತನದವರ ಅಥವಾ ಬೇರೆಯವರಾ? ವಿಜಯನಗರದ ಪತನದ ನಂತರ ಹಲವಾರು ಹಿರಿಯ ಅಧಿಕಾರಿಗಳು ಮತ್ತು ಸೇನಾಧಿಪತಿಗಳು ಇಕ್ಕೇರಿ ಸಂಸ್ಥಾನದಲ್ಲಿ ಆಶ್ರಯ ಪಡೆಯುತ್ತಾರೆ, ಅವರಲ್ಲಿ ಹಲವರಿಗೆ “ನಾಯಕ” ಎಂಬ ಬಿರುದು ಸಹಾ ಇರುತ್ತದೆ, ಅವರೆಲ್ಲ ಮುಂದೆ ಏನಾದರೂ?
ಡಚ್ ದಾಖಲೆಯಲ್ಲಿ ಬಿದನೂರಿನ ನಾಯಕರ, ರಾಣಿಯರ ಮತ್ತು ಇತರೆ ವರ್ಗದವರು ಧರಿಸುತ್ತಿದ್ದ ಪೋಷಾಕು, ಪೇಟ, ಬಟ್ಟೆಯ ವಿನ್ಯಾಸ, ಸೀರೆಯ ವಿನ್ಯಾಸ ಹೀಗೆ ಹತ್ತು ಹಲವಾರು ರೋಚಕ ವಿಷಯಗಳ ಕಥೆಯೇನು? ಹೀಗೆ ಒಂದೊಂದಾಗಿ ಮಾಹಿತಿಯನ್ನು ಪ್ರಕಟಿಸುವ ಮೂಲಕ ಬಿದನೂರಿನ ಇತಿಹಾಸವನ್ನು ತಿಳಿದುಕೊಳ್ಳೋಣ. ಮುಂದಿನ ಅಂಕಣದಲ್ಲಿ ಒಂದೊಂದೇ ಮಾಹಿತಿ ನಿಮ್ಮ ಮುಂದೆ ಹರಡುತ್ತೇನೆ. ಸತ್ಯವನ್ನು ಅರಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಕುತೂಹಲವೂ ಜೊತೆಯಾಗಲೀ ಎನ್ನುವ ಕಳಕಳಿಯೊಂದಿಗೆ..
ಲೇಖನ:-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು, ಶಿವಮೊಗ್ಗ








