ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಕರುಣ್ ನಾಯರ್ ಐಪಿಎಲ್‍ಗೆ ರೆಡಿ..!
ಟೀಮ್ ಇಂಡಿಯಾ ಆಟಗಾರ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಕರ್ನಾಟಕದ ಕರುಣ್ ನಾಯರ್ ಅವರು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದೀಗ ಯುಎಇನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ತಿಂಗಳು ಕರುಣ್ ನಾಯರ್ ಅವರು ಕೋವಿಡ್ ಸೋಂಕಿಗೆ ಒಳಪಟ್ಟಿದ್ದರು. ಆ ನಂತರ ಅವರು ಸುಮಾರು 14 ದಿನಗಳ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದರು. ಆಗಸ್ಟ್ 8ರಂದು ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದು, ನೆಗೆಟಿವ್ ವರದಿ ಬಂದಿದೆ. ಇದೀಗ ಅವರ ಕ್ವಾರಂಟೈನ್ ಅವಧಿ ಮುಗಿದಿದೆ. ಯಾವುದೇ ಸಮಸ್ಯೆ ಇಲ್ಲ. ಆದ್ರೆ ಐಪಿಎಲ್ ನಲ್ಲಿ ಆಡಬೇಕಾದ್ರೆ ಕರುಣ್ ನಾಯರ್ ಅವರು ಇನ್ನೂ ಮೂರು ಟೆಸ್ಟ್‍ಗೆ ಒಳಪಡಬೇಕಾಗಿದೆ.
ಕರುಣ್ ನಾಯರ್ ಈಗ ಆರೋಗ್ಯವಾಗಿದ್ದಾರೆ. ಇದೀಗ ಫಿಟ್‍ನೆಸ್ ಜೊತೆಗೆ ಒಬ್ಬರೇ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಯುಎಇಗೆ ಪ್ರಯಾಣ ಬೆಳೆಸುವುದಕ್ಕಿಂತ ಮುನ್ನ ಮತ್ತೆ ಟೆಸ್ಟ್‍ಗೆ ಒಳಪಡಲಿದ್ದಾರೆ.
2017ರಲ್ಲಿ ಕರುಣ್ ನಾಯರ್ ಅವರು ತ್ರಿ ಶತಕ ದಾಖಲಿಸಿದ್ದರು. ಆ ನಂತರ ನಾಯರ್ ಟೀಮ್ ಇಂಡಿಯಾದಲ್ಲಿ ಸ್ಥಾನ
ಸಿಕ್ಕಿರಲಿಲ್ಲ. 2018ರಲ್ಲಿ ನಾಯರ್ ಅವರು ಪಂಜಾಬ್ ಕಿಂಗ್ಸ್ ಇಲೆವೆನ್ ತಂಡವನ್ನು ಸೇರಿಕೊಂಡಿದ್ರು. ಇವರ ಜೊತೆಗೆ ಮಯಾಂಕ್ ಅಗರ್‍ವಾಲ್ ಹಾಗೂ ಕೆ.ಎಲ್. ರಾಹುಲ್ ಕೂಡ ಕಿಂಗ್ಸ್ ತಂಡದಲ್ಲಿದ್ದಾರೆ. ಮೊದಲ ಬಾರಿಗೆ ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡವನ್ನು ಮುನ್ನಡೆಸಲಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಈ ಬಾರಿ ಯುಎಇನ ದುಬೈ, ಅಬುಧಾಬಿ ಮತ್ತು ಶಾರ್ಜಾ ಮೈದಾನಗಳಲ್ಲಿ ನಡೆಯಲಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಫ್ರಾಂಚೈಸಿಗಳು ದುಬೈಗೆ ಪ್ರಯಾಣ ಬೆಳೆಸಿದ ನಂತರ ಆರು ದಿನಗಳ ಕಾಲ ಆಟಗಾರರು ಮತ್ತು ಸಿಬ್ಬಂದಿಗಳು, ಅಧಿಕಾರಿಗಳು ಕ್ವಾರಂಟೈನ್ ನಲ್ಲಿರಬೇಕಾಗುತ್ತೆ. ಅದೇ ರೀತಿ ಜೈವಿಕ ಸುರಕ್ಷತೆಗೆ ಹೋಗುವ ಮುನ್ನ ಎಲ್ಲಾ ಫ್ರಾಂಚೈಸಿಗಳ ಆಟಗಾರರು ಮತ್ತು ಸಿಬ್ಬಂದಿ ವರ್ಗದ ಸದಸ್ಯರು ಮೂರು ಬಾರಿ ಕೋವಿಡ್-19 ನೆಗೆಟಿವ್ ರಿಪೋರ್ಟ್ ಬಂದಿರಬೇಕು.







