ಅಕ್ಕ ವೀನಸ್‍ಗೆ ಸೋಲಿನ ರುಚಿ ತೋರಿಸಿದ ತಂಗಿ ಸೆರೆನಾ ವಿಲಿಯಮ್ಸ್
ಟಾಪ್ ಸೀಡ್ ಓಪನ್ ಟೂರ್ನಿಯಲ್ಲಿ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಕೆಂಟುಕಿಯ ಲೆಕ್ಸಿಂಗ್ಟನ್ ನಲ್ಲಿ ನಡೆಯುತ್ತಿರುವ ಟಾಪ್ ಸೀಡ್ ಓಪನ್ ಟೂರ್ನಿಯಲ್ಲಿ ಸಹೋದರರಿಯ ನಡುವಿನ ಸ್ಪರ್ಧೆ ರೋಚಕವಾಗಿಯೇ ಸಾಗಿತ್ತು. ಆದ್ರೆ ತಂಗಿಯ ಅಬ್ಬರದ ಆಟಕ್ಕೆ ಅಕ್ಕ ವೀನಸ್ ವಿಲಿಯಮ್ಸ್ ಕೊನೆಗೆ ಸೋಲೊಪ್ಪಿಕೊಳ್ಳಬೇಕಾಯ್ತು.
ತೀವ್ರ ಜಿದ್ದಾಜಿದ್ದಿನಿಂದ ಸಾಗಿದ ಪಂದ್ಯ ಮೊದಲ ಸೆಟ್ ಅನ್ನು ವೀನಸ್ ವಿಲಿಯಮ್ಸ್ 6-3ರಿಂದ ಗೆದ್ದುಕೊಂಡಿದ್ದರು. ಆದ್ರೆ ನಂತರ ಎರಡನೇ ಮತ್ತು ಮೂರನೇ ಟೆಸ್ಟ್ ನಲ್ಲಿ ಸೆರೆನಾ ವಿಲಿಯಮ್ಸ್ ಆಕ್ರಮಣಕಾರಿ ಆಟವನ್ನಾಡಿದ್ರು. ಪರಿಣಾಮ 2 ಮತ್ತು ಮೂರನೇ ಸೆಟ್ ಅನ್ನು ಸೆರೆನಾ ವಿಲಿಯಮ್ಸ್ 6-3, 6-4ರಿಂದ ಗೆದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾದ್ರು.
ಇಲ್ಲಿಯ ತನಕ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಒಟ್ಟು 31 ಬಾರಿ ಪ್ರತಿಸ್ಪರ್ಧಿಗಳಾಗಿ ಅಂಗಣದಲ್ಲಿ ಕಾದಾಟ ನಡೆಸಿದ್ದರು. ಇದ್ರಲ್ಲಿ ಸೆರೆನಾ ವಿಲಿಯಮ್ಸ್ 19 ಬಾರಿ ಗೆದ್ರೆ, ವೀನಸ್ ವಿಲಿಯಮ್ಸ್ 12 ಬಾರಿ ಗೆದ್ದಿದ್ದಾರೆ.
ಟೂರ್ನಿಯಲ್ಲಿ ಟಾಪ್ ಸೀಡ್ ಆಗಿರುವ ಸೆರೆನಾ ವಿಲಿಯಮ್ಸ್ ಮುಂದಿನ ಸುತ್ತಿನಲ್ಲಿ ಕೆನಡಾದ ಲೆಲ್ಹಾಹ್ ಫೆರ್ನಾಂಡೇಜ್ ಅಥವಾ ಅಮೆರಿಕಾದ ಶೇಲ್ಬಿ ರೋಜರ್ಸ್ ಅವರನ್ನು ಎದುರಿಸಲಿದ್ದಾರೆ.








