2020ರ ಐಪಿಎಲ್ ಪ್ರಾಯೋಜಕತ್ವ- ಅಖಾಡಕ್ಕೆ ಎಂಟ್ರಿಯಾದ ಟಾಟಾ ಗ್ರೂಪ್…!
2020ರ ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕಾಗಿ ಪ್ರತಿಷ್ಠಿತ ಟಾಟಾ ಗ್ರೂಪ್ ಆಸಕ್ತಿ ವಹಿಸಿದ್ದು, ಬಿಸಿಸಿಐನ ಬಿಡ್ಡಿಂಗ್ ರೇಸ್ ಲಿಸ್ಟ್ ಗೆ ಸೇರಿಕೊಂಡಿದೆ.
ಈ ನಡುವೆ ಶಿಕ್ಷಣ ತಂತ್ರಜ್ಞಾನ ಕಂಪೆನಿಯಾಗಿರುವ ಅನಾಕಾಡೆಮಿ ಮತ್ತು ಫ್ಯಾಂಟಸಿ ಸ್ಪೋಟ್ರ್ಸ್ ಫ್ಲಾಟ್ ಫಾರ್ಮ್ ಡ್ರೀಮ್ 11 ಕೂಡ ಬಿಸಿಸಿಐಗೆ ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಬಿಡ್ ಸಲ್ಲಿಸಿವೆ.
ಒಂದು ವರ್ಷದ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಬಿಡ್ಡಿಂಗ್ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. ಅಗಸ್ಟ್ 18ರಂದು ಮಧ್ಯಾಹ್ನ 11ರಿಂದ ಅಂತಿಮ ಪ್ರಕ್ರಿಯೆಗಳು ಶುರುವಾಗಲಿವೆ.
ಆದ್ರೆ ಯೋಗ ಗುರು ಪಂತಂಜಲಿ ಹಾಗೂ ಜಿಯೋ ಕಮ್ಯುನಿಕೇಷನ್ ಬಿಡ್ಡಿಂಗ್ ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಮತ್ತೊಂದೆಡೆ ಕೋಕಾ ಕೋಲಾ ಕಂಪೆನಿಯೂ ಬಿಡ್ ಸಲ್ಲಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಬಿಸಿಸಿಐ ಟೈಟಲ್ ಪ್ರಾಯೋಜಕತ್ವಕ್ಕಾಗಿ ಭಾರತದ ಅತಿರಥ -ಮಹಾರಥ ಕಂಪೆನಿಗಳ ನಡುವೆ ಸಾಕಷ್ಟು ಪೈಪೋಟಿ ಕಂಡು ಬರುತ್ತಿದೆ. ಯಾವುದಕ್ಕೂ ಆಗಸ್ಟ್ 18ರವರೆಗೆ ಕಾಯಲೇಬೇಕು.
ಈ ಹಿಂದೆ ಚೀನಾ ಮೂಲದ ವಿವೋ ಕಂಪೆನಿಯೂ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಆದ್ರೆ ಚೀನಾ ಭಾರತದ ಸೈನಿಕರ ಮೇಲೆ ಏಕಾಏಕಿ ದಾಳಿ ನಡೆಸಿದ್ದರಿಂದ ಚೀನಾ ವಸ್ತುಗಳ ಮೇಲೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಅಲ್ಲದೆ ಚೀನಾ ಬ್ಯಾನ್ ಅಭಿಯಾನವೂ ಶುರುವಾಗಿತ್ತು. ಇನ್ನೊಂದೆಡೆ ವಿವೋ ಕಂಪೆನಿಯ ಜೊತೆ ಒಪ್ಪಂದ ಮುಂದುವರಿಸಿದ್ರೆ ಭಾರತದಲ್ಲಿ ಐಪಿಎಲ್ ಗೂ ಬ್ಯಾನ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೂ ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ವಿವೋ ಕಂಪೆನಿಯೇ ಈ ಬಾರಿಯ ಐಪಿಎಲ್ ಟೈಟಲ್ ಒಪ್ಪಂದದಿಂದ ಹಿಂದೆ ಸರಿಯಿತ್ತು.
ಬಿಸಿಸಿಐ ಮತ್ತು ವಿವೋ ಕಂಪೆನಿಯ ಜೊತೆಗಿನ ಐದು ವರ್ಷಗಳ ಒಪ್ಪಂದದಲ್ಲಿ ಪ್ರತಿ ವರ್ಷ 440 ಕೋಟಿ ರೂಪಾಯಿ ಪಾವತಿಸಬೇಕಿತ್ತು. ಇದೀಗ ಬಿಸಿಸಿಐ ಅಷ್ಟೇ ಮೊತ್ತವನ್ನು ಈ ಬಾರಿ ಪ್ರಾಯೋಜಕತ್ವ ವಹಿಸುವ ಕಂಪೆನಿಗಳಿಂದ ನಿರೀಕ್ಷೆ ಮಾಡುತ್ತಿದೆ.
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಜೈವಿಕ ಸುರಕ್ಷತೆಯೊಂದಿಗೆ ನಡೆಯಲಿರುವ ಐಪಿಎಲ್ ಟೂರ್ನಿಯನ್ನು ಮೈದಾನದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ.








