ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಗೆ ಕೊರೋನಾ ಸೋಂಕು
ಹೊಸದಿಲ್ಲಿ, ಅಗಸ್ಟ್15: ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಪ್ರತಿದಿನ ಮಾಧ್ಯಮಗಳಿಗೆ ಮಾಹಿತಿ ನೀಡುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. 1996 ರ ಬ್ಯಾಚ್‌ನ ಆಂಧ್ರಪ್ರದೇಶದ ಕೇಡರ್‌ನ 48 ವರ್ಷದ ಐಎಎಸ್ ಅಧಿಕಾರಿಯಾಗಿದ್ದ ಅಗರ್‌ವಾಲ್ ಅವರನ್ನು ಕೇಂದ್ರ ಸರ್ಕಾರದ ಪರವಾಗಿ ಅಧಿಕೃತ ವಕ್ತಾರರನ್ನಾಗಿ ಮಾಡಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ -19 ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ನೇಮಕ ಮಾಡಲಾಗಿತ್ತು.

ಶುಕ್ರವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನನಗೆ ಕೊರೋನಾ ವೈರಸ್ ಸೋಂಕು ತಗುಲಿರುವುದರ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲು ಬಯಸುತ್ತಿದ್ದೇನೆ. ಪ್ರತ್ಯೇಕ ಮಾರ್ಗಸೂಚಿಗಳ ಅಡಿಯಲ್ಲಿ ನಾನು ಹೋಂ ಕ್ವಾರಂಟೈನ್ ಗೆ ಒಳಗಾಗುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ನನ್ನ ಸಂಪರ್ಕಕ್ಕೆ ಬಂದವರನ್ನು ಆರೋಗ್ಯ ಇಲಾಖೆ ತಂಡ ಪತ್ತೆ ಮಾಡುತ್ತದೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನು ನೋಡುವ ಭರವಸೆಯೊಂದಿಗೆ ಎಂದು ಲಾವ್ ಅಗರ್ವಾಲ್ ಪೋಸ್ಟ್ ಮಾಡಿದ್ದಾರೆ.
ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯನ್ನು ಇನ್ನು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರನ್ನು ನಡೆಸಲಿದ್ದು, ಮಾಧ್ಯಮಗಳಿಗೆ ಕೊರೋನಾ ವೈರಸ್ ಸೋಂಕಿನ ಸ್ಥಿತಿಗತಿಗಳ ಮಾಹಿತಿ ನೀಡಲಿದ್ದಾರೆ.








