ಬೆಂಗಳೂರು ಗಲಭೆ – ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ
ಬೆಂಗಳೂರು, ಅಗಸ್ಟ್ 16: ನಗರದಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿ ತೀವ್ರ ಎದೆ ನೋವಿನಿಂದ ಸಾವನ್ನಪ್ಪಿದ್ದಾನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಶನಿವಾರ ತಿಳಿಸಿದ್ದಾರೆ. ಈ ಮೂಲಕ, ಆಗಸ್ಟ್ 11 ರ ರಾತ್ರಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರು ಸೇರಿದಂತೆ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಆರೋಪಿ ಸೈಯದ್ ನದೀಮ್ ಅಗಸ್ಟ್ 12 ರಿಂದ ಜೈಲಿನಲ್ಲಿದ್ದು, ನಿನ್ನೆ ರಾತ್ರಿ ಎದೆ ನೋವಿನ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಶಃ ಅವನ ಎದೆಯ ಮೇಲೆ ಗಟ್ಟಿಯಾದ ವಸ್ತುವಿನಿಂದ ಹೊಡೆತ ಬಿದ್ದಿರಬೇಕು ಎಂದು ಪಂತ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಗರದ ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ)ಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 12 ರಂದು ಸೈಯದ್ ನದೀಮ್ (24) ಎಂಬಾತನನ್ನು ಬಂಧಿಸಿದ್ದರು. ಆದರೆ ಅವನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತು ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಇಂದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನದೀಮ್ ಸಾವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಪಂತ್ ಅವರು ಬುಲೆಟ್ ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ ಎಂಬುದನ್ನು ನಿರಾಕರಿಸಿದ್ದಾರೆ. ಗುಂಡಿಗೂ ಆತನ ಸಾವಿಗೂ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.