ಕೊರೋನವೈರಸ್ ಲಸಿಕೆ ಉತ್ಪಾದಿಸುವ ವಿಶ್ವದ ಮೊದಲ ದೇಶ ರಷ್ಯಾ ಅಲ್ಲ – ಕಿರಣ್ ಮಜುಂದಾರ್-ಶಾ
ಬೆಂಗಳೂರು, ಅಗಸ್ಟ್ 16: ಕೊರೋನವೈರಸ್ ಲಸಿಕೆ ಉತ್ಪಾದಿಸುವ ವಿಶ್ವದ ಮೊದಲ ದೇಶ ರಷ್ಯಾ ಅಲ್ಲ ಎಂದು ಕಿರಣ್ ಮಜುಂದಾರ್-ಶಾ ಹೇಳಿದ್ದಾರೆ. ವಿಶ್ವದ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದಾಗಿ ರಷ್ಯಾ ಮಾಡಿರುವ ಘೋಷಣೆಯನ್ನು ಬೆಂಗಳೂರಿನ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪ್ರಶ್ನಿಸಿದ್ದಾರೆ.

ಕ್ಲಿನಿಕಲ್ ಪ್ರಯೋಗಗಳು ಮತ್ತು ಇನ್ನಿತರ ಹೆಚ್ಚಿನ ಮಾಹಿತಿಯ ಅನುಪಸ್ಥಿತಿಯನ್ನು ಉಲ್ಲೇಖಿಸಿದ ಬಯೋಕಾನ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಮಾಸ್ಕೋ ಮೂಲದ ಗಮಲೇಯ ಸಂಶೋಧನಾ ಸಂಸ್ಥೆ ನಡೆಸಿದ ಹಂತ 1 ಅಥವಾ 2 ಕ್ಲಿನಿಕಲ್ ಪ್ರಯೋಗಗಳ ಮಾಹಿತಿ ಜಗತ್ತಿಗೆ ಸಿಕ್ಕಿಲ್ಲ. ಹಾಗಿರುವಾಗ ಲಸಿಕೆಯನ್ನು ಸುರಕ್ಷಿತ ಎಂದು ನಂಬಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

3 ನೇ ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸುವ ಮೊದಲು ಲಸಿಕೆ ಬಿಡುಗಡೆ ಮಾಡುವುದು ರಷ್ಯಾಕ್ಕೆ ಸ್ವೀಕಾರಾರ್ಹವಾದರೆ, ಹಾಗೆ ಆಗಲಿ ಎಂದ ಮಜುಂದಾರ್-ಶಾ ಆದರೆ ಇದು ವಿಶ್ವದ ಮೊದಲ ಲಸಿಕೆಯಾಗುವುದಿಲ್ಲ ಏಕೆಂದರೆ ಹಲವಾರು ಇತರ ಲಸಿಕೆ ಪ್ರಯೋಗಗಳು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಿಂತ ಬಹಳಷ್ಟು ಮುಂದಿವೆ ಎಂದು ಅವರು ಹೇಳಿದರು.








