ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಅಲಟ್ ಘೋಷಿಸಲಾಗಿದೆ. ಆಗಸ್ಟ್ 20ರವರೆಗೂ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿದ್ದು, ಅಲ್ಲಿನ ಡ್ಯಾಂಗಳಿಂದಲೂ ಅಪಾರ ಪ್ರಮಾಣದಲ್ಲಿ ನೀರನ್ನ ಹೊರಬಿಡಲಾಗುತ್ತಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ನವಿಲು ತೀರ್ಥ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಡ್ಯಾಂನಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿ ಮನೆ, ಅಂಗಡಿಗಳು ಜಲಾವೃತಗೊಂಡಿವೆ. ಎಂಕೆ ಹುಬ್ಬಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ. ಇದಲ್ಲದೆ ನವಿಲುತೀರ್ಥ ಡ್ಯಾಂನಿಂದ ನೀರು ಬಿಟ್ಟ ಕಾರಣ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಗೋವನಕೊಪ್ಪ-ಕೊಣ್ಣೂರು ಮಾರ್ಗದ ಹಳೆ ರಸ್ತೆ ಸೇತುವೆ ಜಲಾವೃತಗೊಂಡಿದೆ. ಮತ್ತೊಂದಡೆ ಹಿಡಕಲ್ ಡ್ಯಾಂನಿಂದ 33 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿರುವ ಕಾರಣ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು ಮುಧೋಳ ತಾಲೂಕಿನ ಮಾಚಕನೂರಲ್ಲಿರುವ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಇನ್ನು ಬಳ್ಳಾರಿ ಜಿಲ್ಲೆಯಲ್ಲಿರುವ ಜಲಾಶಯದ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ ಇದ್ದು, 1632 ಅಡಿಯಷ್ಟು ನೀರು ಸಂಗ್ರಹಗೊಂಡಿದೆ.
ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂನಿಂದ 2 ಲಕ್ಷ 37 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗ್ತಿದೆ. ಹೀಗಾಗಿ ರಾಯಚೂರಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ಎನ್ ಡಿಆರ್ ಎಫ್ ತಂಡ ಆಗಮಿಸಿದೆ. ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೆಜ್ ನಿಂದ ಭೀಮ ನದಿಗೆ 40 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಗದಗ ಜಿಲ್ಲೆಯಲ್ಲೂ ಪ್ರವಾಹ ಭೀತಿ ಉಂಟಾಗಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಲ್ಲೂ ಮಳೆ ಆಗ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲೂ ಯೆಲ್ಲೋ ಅಲರ್ಟ್ ನೀಡಲಾಗಿದೆ.