ಸಿಆರ್‌ಪಿಎಫ್ ಪಡೆಯ ಮೇಲೆ ಭಯೋತ್ಪಾದಕರ ದಾಳಿ – ಇಬ್ಬರು ಯೋಧರು, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ
ಬಾರಾಮುಲ್ಲಾ, ಅಗಸ್ಟ್ 17: ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಹುತಾತ್ಮರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಕ್ರೆರಿ ಪ್ರದೇಶದಲ್ಲಿ ಸಿಆರ್‌ಪಿಎಫ್ ಮತ್ತು ಪೊಲೀಸರ ಜಂಟಿ ಕಾರ್ಯಚರಣೆ ವೇಳೆ ಭಯೋತ್ಪಾದಕರು ದಾಳಿ ನಡೆಸಿದ್ದರಿಂದ ಭದ್ರತಾ ಸಿಬ್ಬಂದಿಗೆ ಗಂಭೀರ ಗುಂಡೇಟಿನ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ, ಈ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಭಯೋತ್ಪಾದಕರನ್ನು ಬಂಧಿಸಲು ಶೋಧ ನಡೆಯುತ್ತಿದೆ. ಕಳೆದ ಮೂರು ದಿನಗಳಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಎರಡನೇ ದಾಳಿಯಾಗಿದೆ. ಆಗಸ್ಟ್ 14 ರಂದು ಶ್ರೀನಗರದ ನೌಗಮ್ ಪ್ರದೇಶದಲ್ಲಿ ಇದೇ ರೀತಿಯ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದು, ಇನ್ನೊಬ್ಬರು ಗಾಯಗೊಂಡಿದ್ದರು.








