ಬೆಳಗಾವಿ :ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ರೌದ್ರಾವತಾರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಮಹಾಮಳೆಗೆ ಘಟಪ್ರಭಾ ನದಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಪರಿಣಾಮ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಮನೆಗಳು ರಸ್ತೆಗಳೆಲ್ಲಾ ಜಲಾವೃತವಾಗಿ ಗ್ರಾಮಗಳು ನಡುಗಡ್ಡೆಯಾಗಿ ಮಾರ್ಪಾಡಾಗಿ, ನದಿ ತೀರದ ಜನರ ಪಾಡು ಹೇಳತೀರದಂತಾಗಿದೆ.
ಗೋಕಾಕ್ ನಗರದ ದನಗಳ ಪೇಟೆ, ಮಟನ್ ಮಾರ್ಕೆಟ್ ಸೇರಿದಂತೆ ಹಲವು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರೆಲ್ಲರೂ ಮನೆಗಳನ್ನ ಬಿಟ್ಟು ಸುರಕ್ಷಿತ ಸ್ಥಳಗಳತ್ತಾ ತೆರಳಿದ್ದಾರೆ. ಇನ್ನೂ ಕಣ್ಣು ಹಾಯಿಸಿದಷ್ಟೂ ದೂರ ಬರೀ ನೀರೇ ನೀರು ಕಾಣಸುತ್ತಿದೆ. ಇತ್ತ ಮಹಾಮಳೆಗೆ ಅದೆಷ್ಟೋ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿ ಹೋಗಿದೆ.








