ಬೆಳಗಾವಿ : ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ವರುಣಾರ್ಭಟ ಮುಂದುವೆರದ ಪರಿಣಾಮ ಅಲ್ಲಿನ ಡ್ಯಾಂಗಳೆಲ್ಲಾ ಭರ್ತಿಯಾಗಿದೆ. ಈ ಹಿನ್ನೆಲೆ ವಿವಿಧ ಡ್ಯಾಂಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಪರಿಣಾಮ ಕೃಷ್ಣಾ ನದಿ , ವೇದ ಗಂಗಾ ಮತ್ತು ದೂಧಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಇತ್ತ ನದಿ ತೀರದ ಜನರೆಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಹೀಗಾಗಿ ಜನರೆಲ್ಲರೂ ಜಾನುವಾರುಗಳ ಜೊತೆಗೆ ಊರು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಇನ್ನೂ ಇಂಗಳಿ ಗ್ರಾಮಕ್ಕೆ ನದಿ ನೀರು ನುಗ್ಗಿ ಜಮೀನುಗಳು ಜಲಾವೃತಗೊಂಡಿವೆ. ಇನ್ನೂ ಹಲವು ನದಿಪಾತ್ರದ ಗ್ರಾಮಗಳು ನಡುಗಡ್ಡೆಯಾಗಿದ್ದು, ಜನರು ಜಲ ದಿಗ್ಬಂಧನದಲ್ಲಿ ಸಿಲುಕಿ ಪರದಾಡುವಂತಾಗಿದೆ. ದೋಣಿಗಳ ಮೂಲಕ ಜನರು ಸ್ಥಳಾಂತರಗೊಳ್ಳುವ ಪರಿಸ್ಥಿತಿ ಬಂದೊದಗಿದೆ.









