ವಿಕೆಟ್ ಕೀಪಿಂಗ್ ನ ಮಾಯಾವಿ… ತಪ್ಪು ಮಾಡಿದಾಗ ಮಾತಿನಿಂದಲೇ ಛಾಟಿ ಬೀಸುವ ಮಾಹಿ..!
ನಾವು ಹೆಚ್ಚು ಮಾತನಾಡುವವರನ್ನು ಅವನೊಬ್ಬ ದೊಡ್ಡ ಬಿಬಿಸಿ ಮಾರಾಯ ಅನ್ನುವುದು ವಾಡಿಕೆ.. ಹಾಗೇ ಕ್ರಿಕೆಟ್ ಆಟದಲ್ಲೂ ವಿಕೆಟ್ ಕೀಪರ್ ಗಳು ವಿಕೆಟ್ ಹಿಂದುಗಡೆ ನಿಂತುಕೊಂಡು ವಟವಟ ಅಂತ ಏನಾದ್ರೂ ಹೇಳ್ತಾನೆ ಇರುತ್ತಾರೆ. ಇದು ಬ್ಯಾಟ್ಸ್ ಮೆನ್‍ಗಳು ಏಕಾಗ್ರತೆ ಕಳೆದುಕೊಳ್ಳುವಂತೆ ಮಾಡುವ ಪ್ರಯತ್ನ. ಕೆಲವೊಂದು ಬಾರಿ ಇದು ಅತಿರೇಕಕ್ಕೆ ಹೋಗಿದ್ದು ಉಂಟು.. ಬೌಲರ್ ಗಳಿಗೆ ಮತ್ತು ಫೀಲ್ಡರ್ ಗಳಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ವಿಕೆಟ್ ಕೀಪರ್ ಗಳು ತಮ್ಮ ಕೀಪಿಂಗ್ ಜೊತೆ ಮಾಡುತ್ತಿರುತ್ತಾರೆ. ಯಾಕಂದ್ರೆ ವಿಕೆಟ್ ಹಿಂದುಗಡೆ ನಿಂತುಕೊಂಡು ಬ್ಯಾಟ್ಸ್ ಮೆನ್ ತಂತ್ರ ಮತ್ತು ಪಿಚ್ ನ ಮರ್ಮಾವನ್ನು ಅವರಿಗೆ ಬೇಗನೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಹಾಗೇ ಮಹೇಂದ್ರ ಸಿಂಗ್ ಧೋನಿ ಕೂಡ. ಧೋನಿ ಎಲ್ಲ ವಿಕೆಟ್ ಕೀಪರ್‍ಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಪಂದ್ಯದ ಗತಿಯನ್ನು ತಿಳಿದುಕೊಳ್ಳುವ ಕಲೆಯನ್ನು ಧೋನಿ ಸಿದ್ಧಿಸಿಕೊಂಡಿದ್ದಾರೆ. ಎದುರಾಳಿ ತಂಡ ಪ್ಲಾನ್‍ಗಳು, ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾರೆ ಹೀಗೆ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಅರಿತುಕೊಳ್ಳುವ ಧೋನಿಯಂತಹ ವಿಕೆಟ್ ಕೀಪರ್, ಬ್ಯಾಟ್ಸ್ ಮೆನ್ ಹಾಗೂ ನಾಯಕ ಈ ಹಿಂದೆಯೂ ಇರಲಿಲ್ಲ. ಮುಂದೆಯೂ ಬರುವುದಿಲ್ಲ. ಯಾಕಂದ್ರೆ ಧೋನಿ ವಿಶ್ವ ಕ್ರಿಕೆಟ್ ನಲ್ಲಿ ಧೋನಿ ಅಸಾಮಾನ್ಯ ಕ್ರಿಕೆಟಿಗ.
ಹಾಗಂತ ಧೋನಿ ತಾಂತ್ರಿಕವಾಗಿ ಪರಿಪಕ್ವವಾದ ವಿಕೆಟ್ ಕೀಪರ್ ಅಲ್ಲ. ಹಾಗೇ ಕೌಶಲ್ಯಯುತವಾದ ಬ್ಯಾಟ್ಸ್ ಮೆನ್ ಕೂಡ. ಆದ್ರೆ ಬುದ್ಧಿವಂತ ಕ್ರಿಕೆಟಿಗ. ನಾಯಕನಾಗಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಅದನ್ನು ಕಾರ್ಯರೂಪಕ್ಕೆ ತಂದು ಯಶ ಸಾಧಿಸುವ ಚಾಣಕ್ಯತೆ ಧೋನಿಯಲ್ಲಿತ್ತು.
ಧೋನಿ ನಾಯಕತ್ವದಲ್ಲಿ ಆಟಗಾರರು ಆಡ್ತಾರೆ ಅನ್ನುವುದಕ್ಕಿಂತ ಧೋನಿ ತನ್ನ ಮಾರ್ಗದರ್ಶನದಲ್ಲಿ ಆಟಗಾರರನ್ನು ಆಡಿಸ್ತಾರೆ. ಅದ್ರಲ್ಲೂ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಧೋನಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಯಾರೂ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಪ್ರೀತಿ-ವಿಶ್ವಾಸದಿಂದ ಸಲಹೆ ನೀಡುವ ಕೂಲ್ ಕ್ಯಾಪ್ಟನ್, ತನ್ನ ಮಾತನ್ನು ಕೇಳದಿದ್ದಾಗ ತಾಳ್ಮೆಯನ್ನೂ ಕೂಡ ಕಳೆದುಕೊಳ್ಳುತ್ತಾರೆ. ಹಾಗಂತ ಅವರ ಸಿಟ್ಟು ಮುಖದಲ್ಲಿ ಕಾಣುವುದಿಲ್ಲ. ಬದಲಾಗಿ ಮಾತಿನಲ್ಲೇ ಛಾಟಿ ಬೀಸಿ ತನ್ನ ಹಿಡಿತ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ಈಗಾಗಲೇ ಧೋನಿ ವಿಕೆಟ್ ಹಿಂದುಗಡೆ ನಿಂತುಕೊಂಡು ಬೌಲರ್ ಗಳಿಗೆ ಮತ್ತು ಫೀಲ್ಡರ್ ಗಳಿಗೆ ಯಾವ ರೀತಿ ಸಲಹೆ, ಕ್ಲಾಸ್‍ಗಳನ್ನು ತೆಗೆದುಕೊಂಡಿದ್ರು ಎಂಬುದನ್ನು ಪಂದ್ಯವನ್ನು ಸೂಕ್ಷ್ಮವಾಗಿ ನೋಡಿದಾಗ ಗೊತ್ತಾಗುತ್ತೆ. ಸ್ಟಂಪ್ ಮೈಕ್ ಗಳಲ್ಲಿ ಧೋನಿ ವಿಕೆಟ್ ಹಿಂದುಗಡೆ ಏನೆಲ್ಲಾ ಹೇಳಿದ್ದರು ಎಂಬುದು ರೇಕಾರ್ಡ್ ಕೂಡ ಆಗಿದೆ. ಧೋನಿಯ ಸಹಾಯ, ಮಾರ್ಗದರ್ಶನ, ಬೈಸಿಕೊಂಡಿರುವುದು ಹಾಗೂ ಧೋನಿ ಹೇಗೆ ಪ್ರೇರಣೆಯಾಗಿದ್ದರು ಎಂಬುದನ್ನೆಲ್ಲಾ ಕುಲದೀಪ್ ಯಾದವ್, ಚಾಹಲ್, ಇಶಾಂತ್ ಶರ್ಮಾ, ಜಡೇಜಾ ಸೇರಿದಂತೆ ಅನೇಕ ಆಟಗಾರರು ಪ್ರೀತಿಯಿಂದಲೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.